ಕುಮಟಾ: ತಾಲೂಕಿನಲ್ಲಿ ರೈತರು ಭತ್ತ ಹಾಗೂ ತರಕಾರಿಗಳನ್ನು ಹೆಚ್ಚು ಪ್ರಮಾಣದಲ್ಲಿ ಬೆಳೆಯುತ್ತಾರೆ. ಮಳೆಯ ಅಭಾವದಿಂದ ಕೃಷಿ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರಿದೆ. ಜತೆಗೆ ತೋಟಗಾರಿಕೆ ಬೆಳೆಗಳನ್ನು ಅವಲಂಬಿಸಿರುವ ರೈತರೂ ತೊಂದರೆಗೆ ಒಳಗಾಗುವ ಭೀತಿ ನಿರ್ಮಾಣವಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ತಾಲೂಕು ಆಡಳಿತ ಸೌಧದಲ್ಲಿ ಗುರುವಾರ ಆಯೋಜಿಸಿದ್ದ ಬರ ಪರಿಸ್ಥಿತಿ ನಿರ್ವಹಣೆ ಮುಂಜಾಗ್ರತೆಯಾಗಿ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಈ ಬಾರಿ ಮಳೆ ಸರಿಯಾದ ಪ್ರಮಾಣದಲ್ಲಿ ಬಾರದೆ ಇರುವುದರಿಂದ ಬರದ ಭೀತಿ ಎದುರಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನೀರಿನ ಕೊರತೆ ಎದುರಾಗಿ ರೈತರು ಸಂಕಷ್ಟದಲ್ಲಿ ಸಿಲುಕುವ ಸನ್ನಿವೇಶ ನಿರ್ಮಾಣವಾಗಬಹುದು. ಇಂದಿನ ಬರದ ಸ್ಥಿತಿ ಮುಂದಿನ ಬೇಸಿಗೆ ಕಾಲದ ನೀರಿನ ತೀವ್ರ ತುಟಾಗ್ರತೆಯ ಆತಂಕವನ್ನೂ ಹುಟ್ಟುಹಾಕಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ತಾಲೂಕು ಸಂಪೂರ್ಣ ಬರಪೀಡಿತ ಪ್ರದೇಶವಾಗಿದ್ದು, ಹೆಚ್ಚಿನ ಪರಿಹಾರ ಕ್ರಮಗಳಿಗೆ ಸರ್ಕಾರಕ್ಕೆ ವರದಿ ನೀಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಬರ ಪರಿಸ್ಥಿತಿಯ ನಿರ್ವಹಣೆಗೆ ಕೈಗೊಂಡಿರುವ ಮುಂಜಾಗ್ರತೆ ಕ್ರಮಗಳ ಮಾಹಿತಿ ಪಡೆದರು. ರೈತರಿಗೆ ನೆರವಾಗಲು ಅಗತ್ಯವಿರುವ ಮಾರ್ಗೋಪಾಯಗಳ ಬಗ್ಗೆ ಸಲಹೆ ಸೂಚನೆ ನೀಡಿದರು. ಉಪವಿಭಾಗಾಧಿಕಾರಿ ಕಲ್ಯಾಣಿ ವೆಂಕಟೇಶ ಕಾಂಬ್ಳೆ, ತಹಸೀಲ್ದಾರ್ ಸತೀಶ ಗೌಡ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಧರ ನಾಯ್ಕ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಚೇತನ ನಾಯ್ಕ ಸಭೆಯಲ್ಲಿ ಪಾಲ್ಗೊಂಡಿದ್ದರು.