ಜಿಲ್ಲೆ

ಈ ಬಾರಿ ಕರಿಕಗ್ಗ ಅಕ್ಷರಶಃ ನಾಮಾವಶೇಷ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಕುಮಟಾ: ತಾಲೂಕಿನ ಪಾರಂಪರಿಕ ಬೆಳೆಗಳಲ್ಲಿ ಒಂದಾದ ಗಜನಿ ರೈತರ ಜೀವನಾಡಿ ಎನಿಸಿದ ಕರಿಕಗ್ಗ ಈ ಬಾರಿ ಅಕ್ಷರಶಃ ನಾಮಾವಶೇಷವಾಗಿದೆ. ಮುಂದಿನ ವರ್ಷಕ್ಕೆ ಕಗ್ಗ ಬೇಸಾಯಕ್ಕೆ ಎಲ್ಲಿಂದ ಬೀಜ ತರುವುದೆಂಬ ಚಿಂತೆ ರೈತರನ್ನು ಕಾಡತೊಡಗಿದೆ.
ಹಿಂದೆ ಕುಮಟಾ ಕರಾವಳಿಯ 5 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಯಥೇಚ್ಛವಾಗಿ ಹೆಚ್ಚಿನ ಶ್ರಮವಿಲ್ಲದೇ ಬೆಳೆಯುತ್ತಿದ್ದ ಕಗ್ಗದ ಭತ್ತದ ಕೃಷಿ ವ್ಯಾಪ್ತಿ ಇತ್ತೀಚಿನ ವರ್ಷಗಳಲ್ಲಿ ನೂರು ಎಕರೆಗೂ ಕಡಿಮೆಯಾಗಿದೆ. ಮಾಣಿಕಟ್ಟಾ ಗಜನಿಯಲ್ಲಿ ಮುಂಗಾರು ಆರಂಭದಲ್ಲೇ ಬಿತ್ತನೆ ಮಾಡುತ್ತಿದ್ದ ಕಗ್ಗವನ್ನು ಈ ಬಾರಿ ಮಳೆಯ ಹಿನ್ನಡೆಯಿಂದ ಒಂದು ತಿಂಗಳು ವಿಳಂಬವಾಗಿ ಅಂದರೆ ಜುಲೈ ಎರಡನೇ ವಾರದಲ್ಲಿ ಬಿತ್ತನೆ ಮಾಡಲಾಗಿತ್ತು. ಬಿತ್ತನೆ ಮಾಡಿದ ಬೆನ್ನಲ್ಲೇ ಗಜನಿ ಕೋಡಿಯಲ್ಲಿ ಪ್ರವಾಹದ ಸಮಸ್ಯೆ ಎದುರಾಗಿ ಬಹುಪಾಲು ಬೀಜಗಳು ತಲೆ ಎತ್ತಲೇ ಇಲ್ಲ. ಬಿತ್ತನೆ ಮಾಡಿದ್ದ 20 ಎಕರೆ ಪ್ರದೇಶದಲ್ಲಿ 4-5 ಎಕರೆಯಷ್ಟು ಮಾತ್ರ ಅಲ್ಲಲ್ಲಿ ಕಗ್ಗದ ಸಸಿಗಳನ್ನು ಸದ್ಯ ಕಾಣಬಹುದಾಗಿದೆ.
ಒಂದು ತಿಂಗಳು ವಿಳಂಬವಾಗಿ ನಾಟಿ ಮಾಡಲಾದ ಕಗ್ಗದ ಸಸಿಗಳಲ್ಲಿ ಅಳಿದುಳಿದ ಕೆಲವಾದರೂ ಬೆಳೆದು ತೆನೆಯಾದರೆ ಮಾತ್ರ ಸ್ಥಳೀಯವಾಗಿ ಕರಿಕಗ್ಗದ ತಳಿ ಉಳಿದು ಕೊಳ್ಳುತ್ತದೆ. ಇಲ್ಲದಿದ್ದರೆ ಮುಂದಿನ ವರ್ಷ ಕರಿಕಗ್ಗದ ಬೇಸಾಯವೇ ಕಷ್ಟವಾಗಬಹುದು ಎಂಬುದು ಗಜನಿ ರೈತರಾದ ಎಸ್.ಎಂ. ಪೈ, ವಾಸು ಪಟಗಾರ ಮೊದಲದವರ ಆತಂಕವಾಗಿದೆ.

ಕುಮಟಾ ತಾಲೂಕನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಮಳೆ ಕೊರತೆಯಿಂದ ಭತ್ತ ಬೆಳೆಯ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. ಕಗ್ಗ ಬೆಳೆಯ ಸಮಸ್ಯೆ ಗಮನದಲ್ಲಿದೆ. ಪ್ರಕೃತಿ ವಿಕೋಪದಡಿ ಪರಿಹಾರ ಲಭ್ಯವಿದೆ. ಕಗ್ಗದ ಸಮಸ್ಯೆ ಪರಿಹಾರಕ್ಕೆ ಏನು ಮಾಡಬಹುದೆಂದು ಚಿಂತನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.ಶ್ರೀಧರ ನಾಯ್ಕ ಪ್ರಭಾರ ಕೃಷಿ ಸಹಾಯಕ ನಿರ್ದೇಶಕ ಕುಮಟಾ