ಜಿಲ್ಲೆ

ಪರಿಶೀಲನೆ, ಮುಂದೂಡಿ, ಕೈಬಿಡಲಾದ ಕುಮಾರ ಬಜೆಟ್; ಅಂದಾಜು 3.5 ಸಾವಿರ ಕೋಟಿ ರೂ. ಉಳಿಸಿದ ಬಿಎಸ್​ವೈ ಸರ್ಕಾರ

ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಲೋಕಸಭೆ ಚುನಾವಣೆಗೂ ಮುನ್ನ ಮಂಡಿಸಿದ ಬಜೆಟ್ ಆರ್ಥಿಕ ಹಿಂಜರಿತ, ಸಾಲಮನ್ನಾ, ರಾಜಕೀಯ ಅಸ್ಥಿರತೆಗೆ ಸಿಕ್ಕಿ ನಲುಗಿದೆ.

2019ರ ಫೆ.8ರಂದು ಎಚ್.ಡಿ. ಕುಮಾರಸ್ವಾಮಿ ಮಂಡಿಸಿದ್ದ ಆಯವ್ಯಯದಲ್ಲಿನ ಮೂರೂವರೆ ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತದ ಯೋಜನೆಗಳು ಘೋಷಣೆಯಾಗೇ ಉಳಿಯಲಿವೆ. ವರ್ಷ ಕಳೆದರೂ ಕೆಲ ಘೋಷಣೆಗಳು ‘ಪರಿಶೀಲನೆ’ ಹಂತದಲ್ಲೇ ಇವೆ, ಇನ್ನೂ ಕೆಲವು ಸಚಿವ ಸಂಪುಟ ಬಾಗಿಲು ಕಾಯುತ್ತಿವೆ. ಯಾವುದೇ ಭಾಷೆಯಲ್ಲಿ ಹೇಳಿದರೂ ಒಟ್ಟಾರೆ ಈ ಯೋಜನೆಗಳು ಜಾರಿಯಾಗುವುದಿಲ್ಲ ಎಂಬುದು ಹಾಲಿ ಸರ್ಕಾರದ ಮೂಲಗಳ ಮಾಹಿತಿ.

ಯೋಜನೆ ಕೈಬಿಡಲಾಗಿದೆ: ಕುಮಾರಸ್ವಾಮಿ ಮಂಡಿಸಿದ ಬಜೆಟ್ ಮೇಲೆ ಕೈಗೊಂಡ ಕ್ರಮಗಳ ವರದಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಈ ಪೈಕಿ 18 ಯೋಜನೆಗಳನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.

510 ಕೊಟಿ ರೂ. ಮೊತ್ತದ ರೈತ ಕಣಜ ಯೋಜನೆ, ಕೃಷಿ ಉತ್ಪನ್ನ ಜೀವಿತಾವಧಿ ಹೆಚ್ಚಿಸುವ ಸಂಸ್ಕರಣಾ ಘಟಕಗಳ ನಿರ್ವಣಕ್ಕೆ 160 ಕೋಟಿ ರೂ., ಕೃಷಿ ಉತ್ಪನ್ನಗಳ ಸಂಗ್ರಹಣೆ, ಸಹಾಯಧನಕ್ಕೆ 200 ಕೋಟಿ ರೂ., ಮಂಚನಬೆಲೆ ಜಲಾಶಯದ ಕೆಳಭಾಗದ ಉದ್ಯಾನ ಅಭಿವೃದ್ಧಿಗೆ 125 ಕೋಟಿ ರೂ. ಸೇರಿ 18 ಯೋಜನೆಗಳಿಗೆ 1,342 ಕೋಟಿ ರೂ. ವೆಚ್ಚ ಮಾಡಬೇಕಿತ್ತು. ಈಗಾಗಲೆ ಅನುಮೋದಿಸಲಾದ ಕಾಮಗಾರಿಗಳಿಗೆ ಹಣ ಒದಗಿಸು ವುದು ಕಷ್ಟವಾಗಿದ್ದು, ಮುಂದುವರಿದ ಕೆಲಸಗಳಿಗೆ ಆದ್ಯತೆ ಮೇಲೆ ಹಣ ನೀಡಬೇಕಾಗುತ್ತದೆ ಎಂಬ ಕಾರಣ ನೀಡಿ ಸರ್ಕಾರ ಪ್ರಸ್ತಾವನೆ ಕೈಬಿಟ್ಟಿದೆ.

612 ಕೋಟಿ ರೂ. ಮೊತ್ತದ 8 ಘೋಷಣೆಗಳನ್ನು ‘ಮುಂದೂಡಿ’ ಎಂದು ಸಂಬಂಧಿತ ಇಲಾಖೆಗೆ ಸರ್ಕಾರ ಸೂಚನೆ ನೀಡಿದೆ. ಮುಂದೂಡಿ ಎಂದು ಬರೆದಿದ್ದರೂ, ಕೈಬಿಡುವುದು ಎಂಬುದೇ ಇದರರ್ಥ. ಇನ್ನು 33 ಘೋಷಣೆಗಳು ಇಲಾಖಾ ಹಂತದಲ್ಲೇ ‘ಪರಿಶೀಲನೆಯಲ್ಲಿವೆ’. ಬಜೆಟ್ ಘೋಷಣೆಯಾಗಿ ಒಂದು ವರ್ಷವಾಗಿದ್ದು, ಇದೀಗ ಹೊಸ ಬಜೆಟ್ ಮಂಡನೆಯಾಗಿದೆ. ಪರಿಶೀಲನೆಯಲ್ಲಿರುವ ಯೋಜನೆಗಳು ಜಾರಿಯಾಗುವುದು ಬಹುತೇಕ ಅಸಾಧ್ಯ ಎನ್ನಲಾಗುತ್ತಿದೆ. ಈ ಹಿಂದಿನ ಬಜೆಟ್​ಗಳಲ್ಲಿ ಈ ಮಟ್ಟಿಗೆ ಯೋಜನೆಗಳನ್ನು ಕೈಬಿಟ್ಟಿರುವ ಉದಾಹರಣೆಗಳಿಲ್ಲ.

ಇಲಾಖೆಯಿಂದ ಇಲಾಖೆಗೆ ವರ್ಗ!: ಬಜೆಟ್​ನಲ್ಲಿ ಘೋಷಣೆಗೂ ಮುನ್ನ ಯಾವ ಇಲಾಖೆಗೆ ಯೋಜನೆ ಸೇರ್ಪಡೆ ಮಾಡಬೇಕೆಂಬ ಸೂಕ್ತ ಚರ್ಚೆ ನಡೆಯದ ಕಾರಣಕ್ಕೆ 12 ಘೋಷಣೆಗಳು ವಿವಿಧ ಇಲಾಖೆಗಳಿಗೆ ವರ್ಗಾವಣೆಯಾಗಿವೆ. 253 ಕೋಟಿ ರೂ. ಮೊತ್ತದ ಈ ಯೋಜನೆಗಳನ್ನು ಬೇರೊಂದು ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಲಾಗಿರುವ ಬಹಳಷ್ಟು ಘೋಷಣೆಗಳು ಪರಿಶೀಲನೆ ಹಂತದಲ್ಲಿವೆ ಅಥವಾ ಕೈ ಬಿಡಲಾಗಿದೆ.

ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ. ನೀಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಘೋಷಣೆಯಾಗಿತ್ತು. ನಂತರ ಪ್ರಸ್ತಾವನೆ ಕಂದಾಯ ಇಲಾಖೆಗೆ, ಅಲ್ಲಿಂದ ಇದೀಗ ನಗರಾಭಿವೃದ್ಧಿ ಇಲಾಖೆಗೆ ವರ್ಗಾವಣೆಯಾಗಿದೆ.

ನಗರಾಭಿವೃದ್ಧಿ ಇಲಾಖೆ ‘ಪರಿಶೀಲನೆ’ ನಡೆಸುತ್ತಿದೆ. ಘೊಷಣೆಯಾದ ಅತಿ ಹೆಚ್ಚು ಯೋಜನೆಗಳನ್ನು ಕಾರ್ವಿುಕ ಇಲಾಖೆ ವರ್ಗಾವಣೆ ಮಾಡಿದೆ. ಆಟೋ ಚಾಲಕರಿಗೆ ಸೂರು, ಅಪಘಾತ ಸಂದರ್ಭದಲ್ಲಿ ಸಹಾಯ ಸೇರಿ 4 ಪ್ರಸ್ತಾವನೆಗಳನ್ನು ವಾಣಿಜ್ಯ ಮತ್ತು ಕೈಗಾರಿಕೆ, ಸಾರಿಗೆ ಇಲಾಖೆಗಳಿಗೆ ವರ್ಗಾವಣೆ ಮಾಡಲಾಗಿದೆ. ಅದರಲ್ಲಿ ಒಂದು ಯೋಜನೆ ಕೈಬಿಡಲಾಗಿದ್ದರೆ ಮತ್ತೊಂದು ಪರಿಶೀಲನೆ ಹಂತದಲ್ಲಿದೆ.

ಸಂಕಷ್ಟಗಳ ಸರಮಾಲೆ

ಕುಮಾರಸ್ವಾಮಿ ಬಜೆಟ್ ಘೋಷಣೆಗೂ ಮುಂಚಿನಿಂದಲೇ ರಾಜ್ಯ ರಾಜಕೀಯದಲ್ಲಿ ಅಸ್ಥಿರತೆ ಮೂಡಿತ್ತು. ಜತೆಗೆ ಕೃಷಿ ಸಾಲಮನ್ನಾಕ್ಕೆ ಮೈತ್ರಿ ಸರ್ಕಾರ ಹಣ ಹೊಂದಿಸಲು ಹೆಣಗಾಡುತ್ತಿತ್ತು. ಅಲ್ಲದೆ ಆರ್ಥಿಕ ಸಂಕಷ್ಟ, ಜಿಎಸ್​ಟಿ ಕಾರಣಕ್ಕೆ ಸಂಪನ್ಮೂಲ ಕೊರತೆಯಾಗಿದೆ. ಬಜೆಟ್ ಘೋಷಣೆ ನಂತರ ಲೋಕಸಭೆ ಚುನಾವಣೆ ಘೋಷಣೆಯಾಗಿ ಇಡೀ ಸರ್ಕಾರ, ಅಧಿಕಾರಿಗಳು ಅತ್ತ ಮಗ್ನರಾಗಿದ್ದರು.

ಚುನಾವಣೆ ನಂತರ ಮೈತ್ರಿ ಸರ್ಕಾರದಲ್ಲಿ ಅಸಮಾಧಾನ, ಅಸ್ಥಿರತೆಯಿಂದ ಯೋಜನೆ ಜಾರಿಯತ್ತ ಗಮನ ನೀಡಲಾಗಿಲ್ಲ ಎಂದು ಮೂಲಗಳು ಹೇಳಿವೆ. ಇದೀಗ ಕೈಬಿಡಲಾಗಿರುವ, ಪರಿಶೀಲನೆಯಲ್ಲಿರುವ, ಮುಂದೂಡಿರುವ ಬಹಳಷ್ಟು ಯೋಜನೆಗಳು ಮಂಡ್ಯ, ರಾಮನಗರ ಸುತ್ತಲಿನ ಜಿಲ್ಲೆಗಳಿಗೆ ಸಂಬಂಧಿಸಿದ್ದಾಗಿವೆ. ಹೀಗಾಗಿ ಈ ಯೋಜನೆಗಳನ್ನು ಬದಿಗೆ ಸರಿಸಲು ರಾಜಕೀಯ ಕಾರಣಗಳೂ ಇರಬಹುದು ಎಂಬುದು ಆರ್ಥಿಕ ಇಲಾಖೆ ಅಧಿಕಾರಿಯೊಬ್ಬರ ಅಭಿಪ್ರಾಯ.

ಸಂಪುಟ ಒಪ್ಪಿಗೆಯೂ ಅನುಮಾನ

ಕುಮಾರಸ್ವಾಮಿ ಘೋಷಿಸಿದ ಭರವಸೆಗಳ ಪೈಕಿ 900 ಕೋಟಿ ರೂ.ಗೂ ಹೆಚ್ಚಿನ ಮೊತ್ತದ 33 ಪ್ರಸ್ತಾವನೆಗಳು ಸಚಿವ ಸಂಪುಟದ ಒಪ್ಪಿಗೆಗೆ ಕಾದು ಕುಳಿತಿವೆ. ಸಂಘ-ಸಂಸ್ಥೆಗಳಿಗೆ, ಮಠಗಳಿಗೆ ಹಣ ನೀಡುವ ಕೆಲ ಘೋಷಣೆಗಳನ್ನು ಸಂಬಂಧಿಸಿದವರು ಒತ್ತಡ ಹೇರಿ ಜಾರಿ ಮಾಡಿಸಿಕೊಳ್ಳಬಹುದು. ಆದರೆ, ಆರ್ಥಿಕ ಸಂಕಷ್ಟ ಎದುರಾಗಿ ಒಟ್ಟಾರೆ ಬಜೆಟ್ ಗಾತ್ರವೇ ಸಂಕುಚಿತವಾಗಿರುವಾಗ ಇನ್ನುಳಿದ ಬಹುತೇಕ ಘೋಷಣೆಗಳು ಹಾಗೆಯೇ ಉಳಿಯುವುದು ಖಾತ್ರಿಯಾಗಿದೆ.

| ರಮೇಶ ದೊಡ್ಡಪುರ ಬೆಂಗಳೂರು