ಮಂಡ್ಯ: ಆಂಗ್ಲ ಭಾಷೆಯ ಸಾಹಿತಿಗಳು ರಚಿಸಿರುವ ನಾಟಕ, ಕವಿತೆ, ಕಾದಂಬರಿಯಲ್ಲಿ ನಮ್ಮ ರಾಮಾಯಣ, ಮಹಾಭಾರತದ ಒಂದು ಎಳೆ ಹೋಗಿರುತ್ತದೆ. ಅಷ್ಟರ ಮಟ್ಟಿಗೆ ಅವರ ಮೇಲೆ ಪ್ರಭಾವ ಬೀರಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಹೇಳಿದರು.
ನಗರದ ಸೇವಾಕಿರಣ ಸಭಾಂಗಣದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ ಬೆಂಗಳೂರು, ಜಿಲ್ಲಾ ಗಮಕ ಕಲಾ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸೇವಾಕಿರಣ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಕುಮಾರವ್ಯಾಸ ಜಯಂತ್ಯುತ್ಸವ, ಗಮಕ ವಾಚನ ಉದ್ಘಾಟಿಸಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ರಾಮಾಯಣ ಮಹಾಭಾರತ ಕಾವ್ಯಗಳು ಹಲವಾರು ಕಥೆ, ಕಾದಂಬರಿಗೆ ಮೂಲ ಸೆಲೆಯಾಗಿವೆ ಎಂದರು.
ಮಹಾಭಾರತ, ರಾಮಾಯಣದಲ್ಲಿರುವ ಪಾತ್ರಗಳ ಹೆಸರು, ಸ್ಥಳಗಳ ಹೆಸರನ್ನು ಲೆಕ್ಕಹಾಕಿದರೆ ಅದೇ ಒಂದು ದೊಡ್ಡ ಗ್ರಂಥವಾಗುತ್ತದೆ. ಅದರ ಬಗ್ಗೆ ನಾವು ಸಂಶೋಧನೆ ಮಾಡಬಹುದು. ಗದುಗಿನ ನಾರಾಯಣಪ್ಪ, ಕುಮಾರವ್ಯಾಸ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸರಳವಾಗಿ ಮಹಾಭಾರತವನ್ನು ಕನ್ನಡ ಭಾಷೆಯಲ್ಲಿ ಗಮಕ ಕಾವ್ಯದಲ್ಲಿ ರಚಿಸಿದ್ದಾರೆ ಎಂದರು.
ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಮಾತನಾಡಿ, ಪ್ರತಿ ವರ್ಷ ರಾಜ್ಯಸರ್ಕಾರ ಗಮಕ ವಾಚನ, ವ್ಯಾಖ್ಯಾನ ಹಾಗೂ ಕಥಾ ಕೀರ್ತನ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಅರ್ಹರಿಗೆ ‘ಕುಮಾರವ್ಯಾಸ ಪ್ರಶಸ್ತಿಯನ್ನು ಕೊಟ್ಟು ಗೌರವಿಸುತ್ತಿದೆ. ಈವರೆವಿಗೆ ಸಾಕಷ್ಟು ಜನ ಕುಮಾರವ್ಯಾಸ ಪ್ರಶಸ್ತಿ ಪಡೆದಿದ್ದಾರೆ. ಆ ಸಾಲಿಗೆ ಮಂಡ್ಯದಿಂದ ಗಮಕಿ ಸಿ.ವಿ.ವಿದ್ಯಾಶಂಕರ್ ಸೇರ್ಪಡೆಯಾಗಲಿ ಎಂದು ಒತ್ತಾಯಿಸಿದರು.
ಪತ್ರಕರ್ತ ಶ್ರೀಪಾದು ಮಾತನಾಡಿದರು. ಸೇವಾಕಿರಣ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಜಿ.ವಿ.ನಾಗರಾಜು, ಹಿರಿಯ ಗಮಕಿ ಕಲಾಶ್ರೀ ಶೈಲಜಾ ಚಂದ್ರಶೇಖರ್, ಗಮಕ ಗಾಯಕ ಕಲಾಶ್ರೀ ಸಿ.ಪಿ.ವಿದ್ಯಾಶಂಕರ್, ವಿನಯ್‌ಕುಮಾರ್, ನಾರಾಯಣಸ್ವಾಮಿ ಇತರರಿದ್ದರು. ಇದೇ ಸಂಧರ್ಭದಲ್ಲಿ ಕುಮಾರವ್ಯಾಸ ರಚಿತ ಕಾವ್ಯದ ಕೆಲವು ಪ್ರಸಂಗಗಳನ್ನು ಹಾಡಲಾಯಿತು.