ಮಂಗಳೂರು: ಕೂಳೂರು ವೃತ್ತದ ಬಳಿ ಶನಿವಾರ ಸಂಜೆ ಹೊಂಡ ಮುಚ್ಚುವ ಕಾಮಗಾರಿ ನಡೆಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೊಟ್ಟಾರಚೌಕಿಯಿಂದ ಕೂಳೂರು ತನಕ ವಾಹನ ದಟ್ಟಣೆ ಕಂಡು ಬಂತು.
ಕೆಲವು ದಿನಗಳ ಹಿಂದೆ ಕೂಳೂರು ವೃತ್ತದ ಬಳಿ ಒಡೆದು ಹೋಗಿದ್ದ ಕುಡಿಯುವ ನೀರಿನ ಪೈಪ್ ದುರಸ್ತಿ ಮಾಡಲಾಗಿತ್ತು. ಆ ಸ್ಥಳದಲ್ಲಿ ವಾಹನಗಳು ಸಂಚರಿಸುವಾಗ ಮಣ್ಣು ಒಳಗೆ ಜಗ್ಗಿ ದೊಡ್ಡ ಗಾತ್ರದಲ್ಲಿ ಹೊಂಡ ಬಿದ್ದಿತ್ತು. ಲಘು ವಾಹನಗಳ ಅಡಿ ಭಾಗ ರಸ್ತೆಗೆ ತಾಗುವ ಸ್ಥಿತಿ ಉಂಟಾಗಿತ್ತು. ಹಾಗಾಗಿ ಅದನ್ನು ತಕ್ಷಣ ಸರಿಪಡಿಸುವ ಅನಿವಾರ್ಯತೆಯಿಂದ ಹೊಂಡಕ್ಕೆ ಜಲ್ಲಿ ಹಾಕಿ ಸರಿಪಡಿಸಲಾಯಿತು. ಈ ಸಂದರ್ಭ ರಸ್ತೆಗೆ 5 ರಿಂದ 10 ನಿಮಿಷಕ್ಕೊಂದು ಬಾರಿ ತಡೆ ಒಡ್ಡಲಾಯಿತು. ಸುಮಾರು ಎರಡು ತಾಸು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.