ಪುತ್ತೂರು: ಕಪ್ಪುಕಲ್ಲಿನ ಕ್ವಾರಿಯಿಂದ ತ್ಯಾಜ್ಯವನ್ನು ನೀರಿನ ಮೂಲಕ್ಕೆ ಬಿಟ್ಟಿದ್ದು, ಸ್ಥಳೀಯಾಡಳಿತ ಈ ನಿಟ್ಟಿನಲ್ಲಿ ಸೂಕ್ತ ಎಚ್ಚರಿಕೆಯನ್ನು ವಹಿಸಿಲ್ಲ. ಮಳೆಯ ನೀರಿನ ಜತೆಗೆ ಖಾಸಗಿ ಜಮೀನುಗಳಿಗೆ ಕಲ್ಲಿನ ಹುಡಿ ನುಗ್ಗಿ ೧೦ ಎಕರೆಗೂ ಅಽಕ ಜಾಗದ ಕೃಷಿ ಹಾನಿಯಾಗಿದೆ ಎಂದು ಕುಳ ಭಾಗದ ಗ್ರಾಮಸ್ಥರು ಇಡ್ಕಿದು ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು.
ಕಲ್ಲಂದಡ್ಕ ಭಾಗದಲ್ಲಿ ಕಪ್ಪುಕಲ್ಲಿನ ಕೋರೆಯನ್ನು ನಡೆಸಲಾಗುತ್ತಿದ್ದು, ಇಲ್ಲಿನ ತ್ಯಾಜ್ಯವನ್ನು ಚರಂಡಿಯ ಮೂಲಕ ನದಿ ಮೂಲಗಳಿಗೆ ಬಿಡಲಾಗುತ್ತಿದೆ. ಇದು ಬಾಕಿಮಾರು ಅಡ್ಯಾಳ ಮೂಲಕವಾಗಿ ಕುಳ ಗ್ರಾಮದ ಕಟ್ನಾಜೆಯನ್ನು ತಲುಪುತ್ತಿದೆ. ಅತಿಯಾದ ಮಳೆಯ ಪರಿಣಾಮ ನೀರು ಕೃಷಿ ಜಮೀನುಗಳಿಗೆ ನುಗ್ಗಿದ್ದು, ಈ ಸಂದರ್ಭದಲ್ಲಿ ಕೋರೆಯ ತ್ಯಾಜ್ಯವೂ ಬಂದು ಕೃಷಿ ಜಮೀನುಗಳಲ್ಲಿ ತುಂಬಿಕೊಂಡಿದೆ.
ಅಡಕೆ ಮರದ ಗುಂಡಿಗಳಲ್ಲಿ ಜಲ್ಲಿ ಹುಡಿ ತುಂಬಿಕೊಂಡು ಕಾಂಕ್ರೀಟ್ ಹಾಕಿದಂತಾಗಿದ್ದು, ಮರ ಸಾಯುವ ಸ್ಥಿತಿ ನಿರ್ಮಾಣವಾಗಿದೆ. ಗದ್ದೆಗೆ ನೀರಿನ ಜತೆಗೆ ಹರಿದಿರುವ ಹುಡಿ ತೆನೆ ಮೇಲೆ ಬರಲು ಬಿಡುತ್ತಿಲ್ಲ. ಇದರಿಂದ ಸುಮಾರು ೮ ಎಕರೆ ಗದ್ದೆ ಸಂಪೂರ್ಣ ಹಾನಿಯಾಗಿದೆ. ೨ ಎಕರೆ ತೋಟದಲ್ಲಿ ತುಂಬಿಕೊಂಡಿದ್ದು, ತೆರವು ಕಾರ್ಯಕ್ಕೆ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯ ಪಂಚಾಯಿತಿ, ಕಂದಾಯ ಇಲಾಖೆ ಹಾಗೂ ಗಣಿ ಇಲಾಖೆ ಅಽಕಾರಿಗಳಿಗೆ ಪತ್ರ ಬರೆದು ಸಂತ್ರಸ್ತ ರೈತರು ಆಗ್ರಹಿಸಿದ್ದಾರೆ.
ಉಪತಹಸೀಲ್ದಾರ ವಿಜಯ ವಿಕ್ರಮ, ಗ್ರಾಮ ಕರಣಿಕೆ ಕೃತಿಕಾ, ಪಿಡಿಒ ಗೋಕುಲ್‌ದಾಸ್ ಭಕ್ತ ರೈತರ ಮನವಿ ಸ್ವೀಕರಿಸಿ ಮನವೊಲಿಸುವ ಪ್ರಯತ್ನ ಮಾಡಿದರು.
ರೈತ ಸಂಘ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರು, ಕಾರ್ಯದರ್ಶಿ ಇಬ್ರಾಹಿಂ ಖಲೀಲ್, ಮುಖಂಡರಾದ ಮುರಳೀಧರ ರೈ ಮಠಂತಬೆಟ್ಟು, ರಾಜಾರಾಮ ಕೆ.ಬಿ., ಸುಶಾಂತ್ ಶೆಟ್ಟಿ ಕಂಬಳಬೆಟ್ಟು, ಸುಮಿತ್ ಶೆಟ್ಟಿ ಕಂಬಳಬೆಟ್ಟು, ಮೋಹನ್ ಗುರ್ಜಿನಡ್ಕ, ಪ್ರವೀಣ್ ಕುಮಾರ್ ಶೆಟ್ಟಿ ಅಳಕೆಮಜಲು, ಅಶ್ರಫ್ ಅಳಕೆಮಜಲು, ಚೇತನ್ ಓಜಾಲ, ನಾಸಿರ್ ಕೋಲ್ಪೆ, ಕೇಶವ ಕೊಡಿಪ್ಪಾಡಿ, ಸಂತ್ರಸ್ತ ರೈತರಾದ ಈಶ್ವರ ಪೂಜಾರಿ ಕುಳ, ಭಾರತೀ ರೈ, ಕರುಣಾಕರ ಕಟ್ನಾಜೆ, ಗಣೇಶ್ ಪೂಜಾರಿ, ಅಬೂಬ್ಬಕರ್ ಅಳಕೆಮಜಲು, ಮೊಯಿದು ಕುಂಞಿ, ಕೃಷ್ಣ ಮಂಜಪ್ಪಾಲು ಹಾಜರಿದ್ದರು.
ಸೂಕ್ತ ಪರಿಹಾರದ ಭರವಸೆ
ಜಲ್ಲಿ ಹುಡಿ ತುಂಬಿದ ಜಾಗದ ಮೇಲ್ಪದರದ ಮಣ್ಣು ತೆರವು ಮಾಡಿದರೆ ಮಾತ್ರ ಸರಿಯಾದ ಬೆಳೆಯನ್ನು ಪಡೆಯಲು ಸಾಧ್ಯ. ಈಗಾಗಲೇ ಗದ್ದೆ ಬೇಸಾಯಕ್ಕೆ ಮುಂದಾಗಿರುವ ರೈತರಿಗೆ ಈ ವರ್ಷ ಸಂಪೂರ್ಣ ನಷ್ಟವಾಗಲಿದೆ. ಅಡಕೆ ಸಸಿಗಳ ಗುಂಡಿಗಳಿಂದ ಜಲ್ಲಿ ಹುಡಿ ತೆಗೆಸುವುದು ಸಾಹಸದ ಕೆಲಸವಾಗಿದೆ. ಕೃಷಿಕರಿಗೆ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರವನ್ನು ಕೊಡಿಸುವ ಭರವಸೆಯನ್ನು ಅಽಕಾರಿ ವರ್ಗ ನೀಡಿದೆ. ಕೃಷಿಭೂಮಿಗೆ ಆಗಿರುವ ಸಮಸ್ಯೆಯನ್ನು ಸರಿಪಡಿಸಿ ಅದರ ವೆಚ್ಚದ ಮಾಹಿತಿಯನ್ನು ಪಂಚಾಯಿತಿ ಅಭಿವೃದ್ಧಿಗೆ ನೀಡಿದಲ್ಲಿ ಪರಿಹಾರವನ್ನು ಕೊಡಿಸುವ ಭರವಸೆಯನ್ನು ನೀಡಿದ್ದಾರೆ.
ಕಲ್ಲಿನ ಕ್ವಾರಿ ಮಾಲೀಕರ ಜತೆಗೆ ಸಮಸ್ಯೆಯ ಬಗ್ಗೆ ಈಗಾಗಲೇ ಮಾತುಕತೆ ಮಾಡಿ ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದೆ. ನಾವು ಯಾರಲ್ಲೂ ಕೈಚಾಚುವುದಿಲ್ಲ. ನಾವು ಕ್ವಾರಿಗೆ ಬೀಗಜಡಿಯಲು ಸಿದ್ಧರಿದ್ದೇವೆ. ಸಂತ್ರಸ್ತರಿಗೆ ಎರಡು ದಿನದಲ್ಲಿ ಪರಿವಾರ ಕೊಡಿಸಲಾಗುವುದು.
| ಗೋಕುಲ್‌ದಾಸ್ ಭಕ್ತ
ಇಡ್ಕಿದು ಪಿಡಿಒ