ಜಿಲ್ಲೆ

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆವಿಧಿಸಲು ಒತ್ತಾಯ

ಕುಕನೂರು: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಬಾಲಕಿ ಮೇಲಿನ ಅತ್ಯಾಚಾರ, ಹತ್ಯೆ ಖಂಡಿಸಿ ಅತ್ಯಾಚಾರಿಗೆ ಶೀಘ್ರ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಪಟ್ಟಣದ ವೀರಭದ್ರಪ್ಪ ವೃತ್ತದಲ್ಲಿ ಸೋಮವಾರ ತಾಲೂಕು ಗೋರ ಸೇನಾದವರು ಪ್ರತಿಭಟನೆ ನಡೆಸಿ ಶಿರಸ್ತೇದಾರ ಮಹಮ್ಮದ್ ಮುಸ್ತಾಫ್‌ಗೆ ಮನವಿ ಸಲ್ಲಿಸಲಾಯಿತು.

ಗೋರ ಸೇನಾದವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರಕರಣ ವಿರೋಧಿಸಿ ಘೋಷಣೆ ಕೂಗುತ್ತಾ ವೀರಭದ್ರಪ್ಪ ವೃತ್ತದಲ್ಲಿ ವಾಹನಗಳನ್ನು ತಡೆದು ಯುವತಿಯರು ಸೇರಿ ಸೇನೆಯ ಪ್ರಮುಖರು ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಕ್ಕೆ ತಡೆ ಬೀಳಬೇಕು ಎಂದು ಪ್ರತಿಭಟಿಸಿದರು.

ಗೋರ ಸೇನಾ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಮಾತನಾಡಿ, ಮದ್ದೂರು ತಾಲೂಕಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದು ಒಂದು ವಾರ ಕಳೆದರೂ ಯಾವೊಬ್ಬ ಜನಪ್ರತಿನಿಧಿ ಧ್ವನಿ ಎತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಗೋರ ಸೇನೆಯ ವೆಂಕಟೇಶ ರಾಠೋಡ, ಪರಶುರಾಮ ನಾಯಕ, ವಿಶ್ವನಾಥ ಕುಣಿಕೇರಿ, ರಾಘವೇಂದ್ರ ಬಳಗೇರಿ, ಆನಂದ ರಾಠೋಡ, ಅರ್ಜುನ ಕಾರಭಾರಿ, ಮುತ್ತಪ್ಪ, ರಮೇಶ, ಕಿರಣ, ಪ್ರಶಾಂತ, ರವಿ, ಲಿಖಿತಾ, ಯಶೋದಾ, ರೂಪಿಣಿ, ಸೌಂದರ್ಯ, ಅಶ್ವಿನಿ ಇತರರಿದ್ದರು.