ಕುಕನೂರು: ಭಾರತ ವಿಶ್ವದಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದಿಸುವ ದೇಶಗಳಲ್ಲಿ ಒಂದಾಗಿದ್ದು, ಇದು ಆತಂಕಕಾರಿ ವಿಷಯವಾಗಿದೆ ಎಂದು ಪರಿಸರ ಕಾರ್ಯಕರ್ತ ಡಾ.ಎಚ್.ಎಂ. ಸದಾನಂದ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ತಳಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಹಾಗೂ ದಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ), ಮುನಿರಾಬಾದ್ ಕೇಂದ್ರದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ಲಾಸ್ಟಿಕ್ ಮಾಲಿನ್ಯವು ಪರಿಸರಕ್ಕೆ ಕಂಟಕವಾಗುತ್ತಿದೆ. ಅದರ ಪರಿಹಾರ ನಮ್ಮ ಕೈಯಲ್ಲಿದೆ. ಬಟ್ಟೆ ಚೀಲಗಳು, ಬಿದಿರಿನ ಉತ್ಪನ್ನಗಳು ಮತ್ತು ಜೈವಿಕ ವಿಘಟನೀಯ ವಸ್ತುಗಳಂತಹ ಪರಿಸರ ಸ್ನೇಹಿ ಪರ್ಯಾಯಗಳನ್ನು ಅಳವಡಿಸಿಕೊಳ್ಳಬೇಕು. ಏಕ-ಬಳಕೆ ಪ್ಲಾಸ್ಟಿಕ್ ನಿರಾಕರಿಸುವ ಮೂಲಕ ನಾವು ದೊಡ್ಡ ಬದಲಾವಣೆ ತರಬಹುದು ಎಂದರು.
ಕಾರ್ಖಾನೆಗಳಿಂದ ಹೊರಸೂಸುವ ಹಾನಿಕಾರಕ ಧೂಳು ಮತ್ತು ಹೊಗೆಯು ಗಾಳಿಯ ಗುಣಮಟ್ಟ ಮತ್ತು ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇದರ ಜತೆಗೆ ಕೈಗಾರಿಕಾ ತ್ಯಾಜ್ಯ ಮತ್ತು ಒಳಚರಂಡಿಗಳು ಕೃಷಿ ಭೂಮಿ ಮತ್ತು ನೀರಿನ ಸಂಪನ್ಮೂಲಗಳಿಗೆ ಹಾನಿಯನ್ನುಂಟು ಮಾಡುತ್ತಿವೆ. ಇದರಿಂದ ಬೆಳೆ ಇಳುವರಿ ಕಡಿಮೆಯಾಗುತ್ತಿದೆ ಮತ್ತು ನೀರು ಕಲುಷಿತಗೊಳ್ಳುತ್ತಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಲ್.ನದಾಫ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಹಾಗೂ ಮುನಿರಾಬಾದ್ ಕೇಂದ್ರದ ಅಧ್ಯಕ್ಷ ಡಾ.ಎಸ್.ಎಂ. ಶಶಿಧರ್, ಪ್ರಾಧ್ಯಾಪಕರಾದ ಡಾ.ಸುರೇಶ ಕೆ., ಬಸವರಾಜ್ ಹುಣಸಿಹಾಳ, ಪ್ರಶಾಂತ್ ಕಬ್ಬಳ್ಳಿ, ಭುವನೇಶ್ವರಿ ಕುಲಕರ್ಣಿ, ಪುಟ್ಟಪ್ಪ ಇತರರಿದ್ದರು.