ಕುಕನೂರ ತಾಲೂಕಿನ ಯರೇಹಂಚಿನಾಳ-ಕೊಟುಮಚಗಿ ಸಂಪರ್ಕ ರಸ್ತೆ ಪಕ್ಕದ ಜಾಲಿಯನ್ನು ಜೆಸಿಬಿ ಮೂಲಕ ತೆರವುಗೊಳಿಸುತ್ತಿರುವ ರೈತ ಮಹಿಳೆ ಸವಿತಾ ನಾಗರಡ್ಡಿ.  
ಜಿಲ್ಲೆ

ಗೃಹಲಕ್ಷ್ಮಿ ಹಣದಲ್ಲಿ ರಸ್ತೆ ಬದಿ ಜಾಲಿ ತೆರವು

ಕುಕನೂರು: ತಾಲೂಕಿನ ಯರೇಹಂಚಿನಾಳ-ಕೊಟುಮಚಗಿ ಗ್ರಾಮದ ರೈತ ಮಹಿಳೆ ಸವಿತಾ ನಾಗರಡ್ಡಿ ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ತಮ್ಮೂರಿನ ರಸ್ತೆ ಬದಿ ಬೆಳೆದಿರುವ ಜಾಲಿ ಗಿಡಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲು ಮುಂದಾಗಿದ್ದಾರೆ.

ಪ್ರತಿ ತಿಂಗಳು ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ನೀಡಿರುವ 2 ಸಾವಿರ ರೂ. ಹಣವನ್ನು ಖರ್ಚು ಮಾಡದೇ ಕೂಡಿಟ್ಟಿರುವ ರೈತ ಮಹಿಳೆ ಸವಿತಾ ನಾಗರಡ್ಡಿ, ಒಟ್ಟು 22 ಸಾವಿರ ರೂ. ವೆಚ್ಚದಲ್ಲಿ ಯರೇಹಂಚಿನಾಳ-ಕೊಟುಮಚಗಿ ಸಂಪರ್ಕದ 4 ಕಿ.ಮೀ. ರಸ್ತೆ ಬದಿಯಲ್ಲಿ ಬೆಳೆದಿರುವ ಬಳ್ಳಾರಿ ಜಾಲಿ ಗಿಡಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ.

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಎಲ್ಲ ರಸ್ತೆ ಅಭಿವೃದ್ಧಿಯಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರಡ್ಡಿ ಹೇಳುತ್ತಾರೆ. ಯರೇಹಂಚಿ-ಕೊಟುಮಚಗಿ ರಸ್ತೆ ಅಭಿವೃದ್ಧಿಗೆ ಮನವಿ ಸಲ್ಲಿಸಿದಯೂ ಪ್ರಯೋಜನವಾಗಿಲ್ಲ. ಇದನ್ನು ಮನಗ ರೈತ ಮಹಿಳೆ ಸವಿತಾ ಅವರು ನಾಗರಿಕರ ಅನುಕೂಲಕ್ಕಾಗಿ ಗೃಹಲಕ್ಷ್ಮಿ ಹಣದಲ್ಲಿ ರಸ್ತೆ ಬದಿ ಜಾಲಿ ಗಿಡಗಳನ್ನು ತೆರವುಗೊಳಿಸುತ್ತಿದ್ದಾರೆ. ಶಾಸಕ ಇನ್ನಾದರೂ ರಸ್ತೆ ಅಭಿವೃದ್ಧಿ ಮಾಡಿಸಿ ಮಹಿಳೆಯ ಕಾರ್ಯ ಶ್ಲಾಘಿಸಲಿ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಅಂದಪ್ಪ ಕೋಳೂರು ಒತ್ತಾಯಿಸಿದ್ದಾರೆ.

ಯರೇಹಂಚಿನಾಳ-ಕೊಟುಮಚಗಿ ಸಂಪರ್ಕಿಸುವ ರಸ್ತೆ ಪಕ್ಕದಲ್ಲಿ ಜಾಲಿ ಬೆಳೆದು ರಸ್ತೆ ಕಾಣದಂತಾಗಿತ್ತು. ಇದರಿಂದ ರೈತರಿಗೆ ಹಾಗೂ ಸಾರ್ವಜನಿಕರು ಸಾಕಷ್ಟು ತೊಂದರೆಯಾಗಿತ್ತು. ಹೀಗಾಗಿ ಕೂಡಿಟ್ಟಿದ್ದ ಗೃಹಲಕ್ಷ್ಮಿ ಹಣದಲ್ಲಿ ಜಾಲಿ ತೆರವುಗೊಳಿಸುತ್ತಿದ್ದೇನೆ.

ಸವಿತಾ ನಾಗರಡ್ಡಿ, ರೈತ ಮಹಿಳೆ, ಯರೇಹಂಚಿನಾಳ