ಜಿಲ್ಲೆ

ಆಶ್ಲೇಷ ನಕ್ಷತ್ರ ದಿನ ಕುಕ್ಕೆಯಲ್ಲಿ ಭಕ್ತಸಾಗರ

Dakshina Kannada

ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಶ್ಲೇಷ ನಕ್ಷತ್ರ ದಿನ ಸೋಮವಾರ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಆಶ್ಲೇಷ ನಕ್ಷತ್ರದ ಪುಣ್ಯದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಶ್ಲೇಷ ಬಲಿ, ನಾಗಪ್ರತಿಷ್ಠೆ, ಮಹಾಪೂಜೆ ಸೇವೆ ನೆರವೇರಿಸುತ್ತಾರೆ. ಕರೊನಾ ಮುಂಜಾಗ್ರತೆ ದೃಷ್ಟಿಯಿಂದ ಆರೋಗ್ಯ ಇಲಾಖೆ ಸೂಚನೆ ಮೇರೆಗೆ ದೇವಳದಲ್ಲಿ ನಿಗದಿತ ಸೇವಾ ಚೀಟಿ ನೀಡುತ್ತಿರುವುದರಿಂದ ಮುಂಜಾನೆ ಸಾಲಿನಲ್ಲಿ ನಿಂತರೆ ರಶೀದಿ ದೊರಕದು ಎಂದು ಭಕ್ತರು ಭಾನುವಾರ ರಾತ್ರಿಯೇ ಸಾಲು ನಿಂತಿದ್ದರು. ಮಳೆಯ ನಡುವೆಯೂ ರಾತ್ರಿ ಇಡೀ ನಿಂತು ಮುಂಜಾನೆ 6 ಗಂಟೆಗೆ ಸೇವಾ ಕೌಂಟರ್‌ನಲ್ಲಿ ಸೇವಾ ಚೀಟಿ ಪಡೆದುಕೊಂಡರು. 300 ಆಶ್ಲೇಷ ಬಲಿ ಸೇರಿ, ನಿಗದಿತ ಸಂಖ್ಯೆಯಲ್ಲಿ ನಾಗಪ್ರತಿಷ್ಠೆ, ಶೇಷಸೇವೆ, ಮಹಾಪೂಜೆ ಸೇವೆಗಳು ನೆರವೇರಿವೆ.

ನಿರ್ವಹಣೆ ಒತ್ತಡ: ದಿನದಿಂದ ದಿನಕ್ಕೆ ಭಕ್ತರ ಆಗಮನ ಹೆಚ್ಚಾಗುತ್ತಿರುವುದರಿಂದ ಸೇವೆಗಳ ಸಂಖ್ಯೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ರಾತ್ರಿ ಪೂರ್ತಿ ಜನ ಸಾಲಿನಲ್ಲಿ ನಿಲ್ಲುವುದರಿಂದ ದೈಹಿಕ ಅಂತರ ಸೇರಿದಂತೆ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ. ಭಕ್ತರ ಆರೋಗ್ಯದ ದೃಷ್ಟಿಯಿಂದ ಸಮಯಾವಕಾಶ ತೆಗೆದುಕೊಂಡು ಸೇವೆಗಳನ್ನು ನೆರವೇರಿಸಲು ಆಗಮಿಸುವುದು ಒಳಿತು ಎನ್ನುವುದು ದೇವಳದ ಅಧಿಕಾರಿಗಳ ಅಭಿಪ್ರಾಯ.