ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ. 
ಜಿಲ್ಲೆ

ಸರ್ಪಗಳ ಕಾಳಜಿ ಇರಲಿ: ನಾಗರಾಧನೆ ಕ್ಷೇತ್ರದಲ್ಲೇ ಹಾವುಗಳಿಗೆ ವಾಹನಗಳಿಂದ ಅಪಾಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ನಾಗಾರಾಧನೆಯ ಪುಣ್ಯತಾಣ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗನ ರಕ್ಷಣೆಗೆ ಕ್ಷೇತ್ರದ ವತಿಯಿಂದ ಆದ್ಯತೆ ನೀಡಬೇಕಾದ ಅಗತ್ಯವಿದೆ. ಕ್ಷೇತ್ರದಲ್ಲಿ ನಾಗ ಸಂಚಾರ ಇರುವ ಪ್ರದೇಶದಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಬೀಳಬೇಕಿರುವುದು ಅತ್ಯಗತ್ಯವಾಗಿದೆ.

ಸರ್ಕಾರದ ಧರ್ಮಾದಾಯಿ ದತ್ತಿ ವ್ಯಾಪ್ತಿಯಲ್ಲಿನ ಕಡಬ ತಾಲೂಕಿನ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಎಲ್ಲ ತರಹದ ನಾಗದೋಷಗಳ ಪರಿಹಾರ ಸ್ಥಳವಾಗಿದೆ. ದೇಶದ ಮೂಲೆ ಮೂಲೆಗಳಿಂದ ಸರ್ಪಸಂಸ್ಕಾರ, ನಾಗಪ್ರತಿಷ್ಠಾಪನೆ, ಆಶ್ಲೇಷ ಬಲಿ ಹಾಗೂ ಇತರ ಪೂಜಾದಿಗಳನ್ನು ಸಲ್ಲಿಸಲು ಭಕ್ತರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಒಂದೊಮ್ಮೆ ಕಾಡುಪ್ರದೇಶದಿಂದ ಕೂಡಿದ್ದ ಕುಕ್ಕೆ ಸುಬ್ರಹ್ಮಣ್ಯ ಇಂದು ಅಭಿವೃದ್ಧಿ ಹೊಂದುತ್ತಾ ಪಟ್ಟಣವಾಗಿ ಬೆಳೆದು ನಿಂತಿದೆ. ಇದರ ಜತೆಗೆ ಕ್ಷೇತ್ರದಲ್ಲಿ ನಾಗ ಸಂಚಾರ ನಿರಂತರವಾಗಿ ಇರುತ್ತದೆ. ಇವುಗಳ ರಕ್ಷಣೆಗೂ ಕ್ಷೇತ್ರದ ವತಿಯಿಂದ ಪೂರಕ ಕ್ರಮಕೈಗೊಳ್ಳಬೇಕಾದ ಅಗತ್ಯವಿದೆ.

ಪ್ರಸ್ತುತ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಕಾಂಕ್ರೀಟ್ ಕಾಮಗಾರಿಗಳು ನಡೆದಿದ್ದು, ಎಲ್ಲ ಕಡೆಗಳಲ್ಲೂ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದೆ. ಇದರಿಂದಾಗಿ ವಾಹನಗಳು ವೇಗವಾಗಿ ಸಂಚರಿಸುವಾಗ ಚಕ್ರದಡಿ ಸಿಲುಕಿ ಜೀವಿಗಳು ಪ್ರಾಣವನ್ನು ಕಸಿದುಕೊಳ್ಳುತ್ತಿದ್ದು, ಇದರಲ್ಲಿ ಸರ್ಪಗಳೂ ಸೇರಿವೆ. ಕ್ಷೇತ್ರದಲ್ಲಿ ಈವರೆಗೆ ಹಲವು ಸರ್ಪಗಳ ಸಾವು ಸಂಭವಿಸಿದೆ.

ಕ್ಷೇತ್ರದಲ್ಲಿ ಸರ್ಪಗಳು ಸಂಚರಿಸುವ ಪ್ರದೇಶಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲಿ ವಾಹನ ಸಂಚಾರ ನಿರ್ಬಂಧ ಅಥವಾ ಸರ್ಪ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ. ಜತೆಗೆ ಕ್ಷೇತ್ರದ ಅಲ್ಲಲ್ಲಿ ಸೂಚನಾ ಫಲಕ ಅಳವಡಿಸಿ ಸರ್ಪಗಳ ಸಂಚಾರವನ್ನು ತಿಳಿಸಿ ವಾಹನಗಳ ವೇಗವನ್ನು ನಿಯಂತ್ರಿಸಲು ಸೂಚಿಸುವುದು, ಸರ್ಪಗಳ ರಕ್ಷಣೆಗೆ ಸಾರ್ವಜನಿಕರೂ ಸಹಕಾರ ನೀಡುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಆದಿ ಸುಬ್ರಹ್ಮಣ್ಯ ಸಂಪರ್ಕ ರಸ್ತೆ, ಆದಿಶೇಷ ಗೆಸ್ಟ್ ಹೌಸ್ ಪ್ರದೇಶ ಸರ್ಪ ಸಂಚಾರದ ಸ್ಥಳಗಳು ಎಂದು ಗುರುತಿಸಿಕೊಂಡಿವೆ.

ವಿವಿಧ ಕಾರಣಗಳಿಂದ ಗಾಯಗೊಳ್ಳುವ ಸರ್ಪಗಳಿಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ (ಎಲ್ಲ ರೀತಿಯ ಹಾವುಗಳ) ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಅಗತ್ಯದ ಬಗ್ಗೆ ಒತ್ತಾಯಗಳು ಕೇಳಿಬಂದಿವೆ. ವಿವಿಧ ಕಾರಣಗಳಿಂದ ಸರ್ಪಗಳು ಸಾವನ್ನಪ್ಪಿದ ಸಂದರ್ಭದಲ್ಲಿ ಅದಕ್ಕೆ ಅಂತಿಮ ಕಾರ್ಯಗಳನ್ನು ಸಂಪ್ರದಾಯದಂತೆ ನೆರವೇರಿಸಲು ದೇವಳದ ಕಡೆಯಿಂದ ಪೂರಕ ಕ್ರಮ ಕೈಗೊಳ್ಳಬೇಕಾದುದು ಅತ್ಯಗತ್ಯವಾಗಿದೆ.

ವೇಗಕ್ಕೆ ಬೀಳಬೇಕಿದೆ ಕಡಿವಾಣ

ಕ್ಷೇತ್ರದಲ್ಲಿ ರಸ್ತೆಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಮಾಡಲಾಗಿದ್ದು, ಏಕಮುಖ ಸಂಚಾರದ ನಿಯಮವನ್ನೂ ರೂಪಿಸಲಾಗಿದೆ. ಇದರಿಂದ ವಾಹನ ಸವಾರರು ಅತಿ ವೇಗದಿಂದ ಸಂಚರಿಸುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಅರಣ್ಯ ಪ್ರದೇಶ, ನದಿ-ತೋಡುಗಳ ಸಮೀಪದಲ್ಲೇ ಇದ್ದು, ಸರ್ಪಗಳು ಅರಣ್ಯ, ಪೇಟೆಯಲ್ಲೂ ಸಂಚರಿಸುತ್ತಿರುತ್ತವೆ. ರಸ್ತೆಯನ್ನೂ ದಾಟುತ್ತಿರುತ್ತವೆ. ಆದರೆ ರಸ್ತೆ ದಾಟುವ ಅಥವಾ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನದಡಿ ಸರ್ಪಗಳು ಸಿಲುಕಿ ಸಾವನ್ನಪ್ಪುವ ಘಟನೆಯೂ ಇಲ್ಲಿ ಸಂಭವಿಸುತ್ತಿದ್ದು, ಇದಕ್ಕಾಗಿ ಕ್ಷೇತ್ರದಲ್ಲಿ ವಾಹನಗಳ ವೇಗದ ಸಂಚಾರಕ್ಕೆ ಕಡಿವಾಣ ್ನ ಅಗತ್ಯವಾಗಿ ಹಾಕಬೇಕಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಸರ್ಪಗಳ ಸಂಚಾರ ಇರುವ ಮಾಹಿತಿಯನ್ನು ಪಡೆದು, ಸರ್ಪ ಸಂಚಾರದ ಹಾಟ್‌ಸ್ಪಾಟ್‌ಗಳನ್ನು ಗುರುತಿಸುವ ಕಾರ್ಯ ಮಾಡಲಾಗುವುದು. ಕ್ಷೇತ್ರದ ಎಲ್ಲ ಕಡೆಗಳಲ್ಲೂ ಸರ್ಪ ಸಂಚಾರದ ಫಲಕ ಅಳವಡಿಸಿ ವಾಹನಗಳ ವೇಗದ ಸಂಚಾರಕ್ಕೆ ಕಡಿವಾಣ ಹಾಕಲಾಗುವುದು. ಸರ್ಪ, ಜಾನುವಾರು, ಪಶು-ಪಕ್ಷಿಗಳ ರಕ್ಷಣೆಗೆ ಆದ್ಯತೆ ನೀಡಲಾಗುವುದು. ಸರ್ಪಗಳ ಚಿಕಿತ್ಸೆಗಳಿಗೂ ಕುಕ್ಕೆಯಲ್ಲೇ ವ್ಯವಸ್ಥೆ ಕಲ್ಪಿಸುವ ಬಗ್ಗೆ ಗಮನ ಹರಿಸುತ್ತೇವೆ ಜುಬಿನ್ ಮೊಹಾಪಾತ್ರ ಆಡಳಿತಾಧಿಕಾರಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ https://www.vijayavani.net/brahmananda-sri-chaturmasya https://www.vijayavani.net/street-light-problem-in-bekal