ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರೋತ್ಸವದ ಪ್ರಯುಕ್ತ ಮಾರ್ಗಶಿರ ಶುದ್ಧ ಚೌತಿಯ ದಿನವಾದ ಗುರುವಾರ ಪುಷ್ಪಾಲಂಕೃತ ರಥದಲ್ಲಿ ಶ್ರೀ ದೇವರ ಹೂವಿನ ತೇರಿನ ಉತ್ಸವ ಭಕ್ತಿ ಸಡಗರದಿಂದ ನಡೆಯಿತು. ಮಹಾಪೂಜೆಯ ನಂತರ ದೇವಳದ ಹೊರಾಂಗಣದಲ್ಲಿ ಬಂಡಿ ಉತ್ಸವ, ಪಾಲಕಿ ಉತ್ಸವ ಹಾಗೂ ಸಂಗೀತ, ಮಂಗಳವಾದ್ಯ, ನಾದಸ್ವರ, ಬ್ಯಾಂಡ್ ಸುತ್ತುಗಳ ಬಳಿಕ ರಥಬೀದಿಗೆ ದೇವರ ಪ್ರವೇಶವಾಯಿತು. ಬಳಿಕ ಉತ್ತರಾದಿ ಮಠದಲ್ಲಿ ಮಯೂರ ವಾಹನ ಸುಬ್ರಹ್ಮಣ್ಯ ದೇವರಿಗೆ ಪೂಜೆ ನೆರವೇರಿತು.
ಪುಷ್ಪರಥ:
ಸೇವಂತಿಗೆ, ಚೆಂಡು, ಗೊಂಡೆ, ಮಲ್ಲಿಗೆ, ತುಳಸಿ, ಕಾಕಡ, ಸುಗಂಧರಾಜ, ಜೀನ್ಯ ಮೊದಲಾದ ಹೂವಿನಿಂದ ಅಲಂಕೃತವಾದ ಮತ್ತು ಜಗಮಗಿಸುವ ವಿದ್ಯುದ್ದೀಪಾಲಂಕಾರದ ಸೊಬಗಿನ ಹೂವಿನ ತೇರಿನಲ್ಲಿ ದೇವರು ಉತ್ಸವದಲ್ಲಿ ಕಾಶಿಕಟ್ಟೆಗೆ ತೆರಳಿದರು. ಆನೆ ಸೇರಿದಂತೆ ಬಿರುದಾವಳಿಗಳಾದ ತಂಬಿಲಾಲ, ಬಟ್ಟೆಯ ನಿಶಾನಿ, ಮಕರ ತೋರಣ, ಸತ್ತಿಗೆ, ಜಾಲರಿಕೊಡೆ, ಬೆಳ್ಳಿಯ ಪಂಚ ದೀವಟಿಕೆಗಳು ಉತ್ಸವಕ್ಕೆ ಹೆಚ್ಚಿನ ಮೆರುಗನ್ನು ನೀಡಿತು.
ಸಹೋದರರ ಸಮಾಗಮ:
ಹೂವಿನ ತೇರಿನಲ್ಲಿ ಸುಬ್ರಹ್ಮಣ್ಯ ದೇವರು ಸಹೋದರ ಕಾಶಿಕಟ್ಟೆ ಮಹಾಗಣಪತಿಯ ಸನ್ನಿಧಿಗೆ ಆಗಮಿಸಿದರು. ಮಹಾಗಣಪತಿ ಸನ್ನಿಧಾನದಲ್ಲಿ ವಿಶೇಷ ಹೂ ಮತ್ತು ಹಣತೆಗಳ ಶೃಂಗಾರದ ನಡುವೆ ಮಹಾಗಣಪತಿಗೆ ರಂಗಪೂಜೆ ನೆರವೇರಿತು. ಬಳಿಕ ವಾಸುಕಿ ಛತ್ರದ ಕಟ್ಟೆಯಲ್ಲಿ ಕಟ್ಟೆಪೂಜೆ ನೆರವೇರಿತು. ನಂತರ ಶಿವರಾತ್ರಿ ಕಟ್ಟೆಯಲ್ಲಿ ಪೂಜೆ ನಡೆಯಿತು. ಸವಾರಿ ಮಂಟಪದ ಅವಲಕ್ಕಿ ಕಟ್ಟೆಯಲ್ಲಿ ಕಟ್ಟೆಪೂಜೆ ನೆರವೇರಿತು.
ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಮತ್ತು ಶ್ರೀ ದೇವಳದ ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಸೇರಿದಂತೆ ದೇವಳದ ಸಿಬ್ಬಂದಿ, ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.