ಮಂಗಳೂರು: ಹಿಂದು ದಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಸಾರ್ವಜನಿಕ ದೇವಸ್ಥಾನಗಳಲ್ಲಿ ಆಯಾಯ ದೇವರಿಗೆ ಯಾವ ರೀತಿಯಲ್ಲಿ ಪೂಜೆ ಸಲ್ಲಬೇಕೋ ಅದೇ ರೀತಿಯಲ್ಲಿ ಪೂಜೆ ನಡೆಯಬೇಕು. ಅಂತಯಾರ್ಮಿ ಪೂಜೆ ಸಲ್ಲದು ಎಂದು ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿಯೂ ದೇವಳದ ದಿಟ್ಟಂ(ಪೂಜಾ ಪದ್ಧತಿ) ಪ್ರಕಾರವಾಗಿಯೇ ಪೂಜೆ ಸಲ್ಲಬೇಕಾಗಿದೆ. ಆದರೆ ಪ್ರಸ್ತುತ ಅಲ್ಲಿ ಶಿವ ದೇವರನ್ನು ಕೆಳಗಿನ ಕಕ್ಷೆಯಲ್ಲಿರಿಸಿ ತಾರತಮ್ಯದ ಪೂಜೆ ಸಲ್ಲಿಸಲಾಗುತ್ತಿದೆ. ಸಂಪ್ರದಾಯಕ್ಕೆ ವಿರುದ್ಧವಾಗಿ ಸಂಕರ್ಷಣನಿಗೆ ಎಂದು ವಿಷ್ಣುವಿಗೆ ಪೂಜೆ ಸಲ್ಲಿಸುತ್ತಾರೆ. ಶಿವಳ್ಳಿ ಬ್ರಾಹ್ಮಣರ ಪೈಕಿ ಇರುವ ಶೇ.25ರಷ್ಟು ಮಾಧ್ವರಿಂದ ಇಂದು ಪೂಜಾ ಪದ್ಧತಿಗಳು ಬದಲಾಗುತ್ತಿದೆ. ಕಟೀಲು, ಪುತ್ತೂರು, ಕಡುಪು ಸೇರಿದಂತೆ ಕರಾವಳಿಯ ವಿವಿಧ ದೇವಳಗಳಲ್ಲಿ ಪೂಜಾ ಪದ್ಧತಿಯನ್ನೇ ಬದಲಾಯಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಮಹೇಶ್ ಕುಮಾರ್ ಕೆ.ಎಸ್.ಆರೋಪಿಸಿದ್ದಾರೆ.
ಕುಕ್ಕೆ ದೇವಳಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಶೈವಾರಾಧನ ಕ್ಷೇತ್ರವಾಗಿರುವ ಅಲ್ಲಿ 700 ವರ್ಷಗಳ ಹಿಂದೆ ಆರಂಭವಾದ ಮಾಧ್ವ ವೈಷ್ಣವ ಪದ್ಧತಿಯನ್ನು ಕ್ಷೇತ್ರದಲ್ಲಿ ಅನುಸರಿಸಲು ಹೇಗೆ ಸಾಧ್ಯ. ಹಾಗಾದರೆ ಅದಕ್ಕಿಂತ ಮೊದಲು ಅಲ್ಲಿ ಪೂಜೆ ನಡೆಯುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದ ಅವರು, ಶೈವ-ವೈಷ್ಣವರಲ್ಲಿ ಬೇಧವಿಲ್ಲ, ನಾವೂ ರುದ್ರ ದೇವರ ಪೂಜೆ ಮಾಡುತ್ತೇವೆ ಎಂದು ಹೇಳುವ ಮಾಧ್ವ ಮಠಾಧಿಪತಿಗಳು, ಪಂಡಿತರು ಅವರ ಶಿಷ್ಯರಿಗೆ ಆಯಾಯ ದೇವಸ್ಥಾನಗಳಲ್ಲಿ ಆಯಾಯ ದೇವರಿಗೆ ನೇರವಾಗಿ ಪೂಜೆ ಮಾಡುವಂತೆ ಹೇಳಿಕೆ ಕೊಡಲಿ. ಆಗ ಪೂಜಾಪದ್ಧತಿ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಪೂಜಾ ಪದ್ಧತಿ ತಿಳಿಯದ ಜನಸಾಮಾನ್ಯರನ್ನು ದಾರಿ ತಪ್ಪಿಸುವುದುದು ಬೇಡ ಎಂದು ಆಗ್ರಹಿಸಿದರು.
ವೇದಿಕೆ ಕಾರ್ಯದರ್ಶಿ ಶ್ರೀನಾಥ ಟಿ.ಎಸ್., ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್ ಪಂಜ, ಸದಸ್ಯರಾದ ಮೋನಪ್ಪ ಮಾರ್ನಾಡು, ಪ್ರಶಾಂತ್ ಮಾಣಿಲ ಉಪಸ್ಥಿತರಿದ್ದರು.