ಮಂಗಳೂರು: ಕಳೆದ ವರ್ಷದ ನ. 19ರಂದು ಮಂಗಳೂರಿನ ಕಂಕನಾಡಿ ನಾಗುರಿಯಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಿಶೇಷ ನ್ಯಾಯಾಲಯಕ್ಕೆ ಅಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ಶಾರಿಕ್ ಹಾಗೂ ಸಯ್ಯದ್ ಯಾಸೀನ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಶಂಕಿತ ಉಗ್ರರು ಕುಕ್ಕರ್‌ನಲ್ಲಿ ಸುಧಾರಿತ ಸ್ಫೋಟಕ ತೆಗೆದುಕೊಂಡು, ಆಟೋದಲ್ಲಿ ಹೋಗಿ ಕದ್ರಿ ಮಂಜುನಾಥ ದೇವಸ್ಥಾನ ಸ್ಫೋಟಕ್ಕೆ ಸಂಚು ನಡೆಸಿದ್ದರು.
2022ರ, ನ.19ರಂದು ನಗರದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡ ಬಾಂಬ್ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಮಂಗಳೂರಿನಲ್ಲಿ 2020 ರಲ್ಲಿ ಬರೆಯಲ್ಪಟ್ಟಿದ್ದ ಉಗ್ರ ಗೋಡೆ ಬರಹ ಪ್ರಕರಣದ ಆರೋಪಿಯಾಗಿದ್ದ ಮಹಮ್ಮದ್ ಶಾರೀಕ್ ತಂದ ಬಾಂಬ್ ಅವನ ಕಾಲ ಬುಡದಲ್ಲೇ ಸ್ಫೋಟಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಕರ್ನಾಟಕದಲ್ಲಿ ಐಸಿಸ್ ಮಾದರಿ ಕೃತ್ಯಕ್ಕೆ ಸಂಚು ರೂಪುಗೊಂಡಿದ್ದು ಈ ಸ್ಫೋಟದಿಂದ ಬಯಲಾಗಿತ್ತು. ಶಿವಮೊಗ್ಗದಲ್ಲಿ ಶಂಕಿತ ಉಗ್ರ ಮಾಝ್ ಮುನೀರ್ ಅಹ್ಮದ್ ಬಂಧನವಾಗುತ್ತಿದ್ದಂತೆ ಶಾರೀಕ್ ಅಲ್ಲಿಂದ ಪರಾರಿಯಾಗಿ ಮಂಗಳೂರು, ಮೈಸೂರು, ಕೇರಳ, ತಮಿಳುನಾಡು ಸುತ್ತಾಡಿಕೊಂಡಿದ್ದ. ಹಿಂದೂ ವೇಷ ಧರಿಸಿ ಮೈಸೂರಿನಲ್ಲಿ ಬಾಡಿಗೆ ಮನೆ ಮಾಡಿ ಅಲ್ಲಿಂದ ತನ್ನ ಉಗ್ರ ಕೃತ್ಯ ಮುಂದುವರೆಸಿದ್ದ.