ಕುಕನೂರು ತಾಲೂಕಿನ ಹಿರೇಬೀಡಿನಾಳದಲ್ಲಿ ವಿವಿಧ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮವನ್ನು ಸಚಿವ ಹಾಲಪ್ಪ ಆಚಾರ್ ಮಂಗಳವಾರ ಉದ್ಘಾಟಿಸಿದರು. 
ಜಿಲ್ಲೆ

ನರೇಂದ್ರ ಮೋದಿಯಿಂದ ಭಾರತ ವಿಶ್ವಗುರು, ಸಚಿವ ಹಾಲಪ್ಪ ಆಚಾರ್ ಅಭಿಮತ

ಕುಕನೂರು: ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಾರತ ವಿಶ್ವಗುರು ಆಗಿದೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು. ತಾಲೂಕಿನ ಹಿರೇಬೀಡಿನಾಳದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು.

ಕರೊನಾ ಸಂದರ್ಭದಲ್ಲಿ ಮೋದಿ 100 ರಾಷ್ಟ್ರಗಳಿಗೆ ಲಸಿಕೆ ನೀಡಿದರು. ಕಾಂಗ್ರೆಸ್ ಪಕ್ಷದ ಪ್ರಧಾನಿಗಳನ್ನು ಕಂಡರೆ ಹಾವಾಡಿಗರ ದೇಶದ ಪ್ರಧಾನಿ ಎಂದು ಬಿಂಬಿಸುತ್ತಿದ್ದ ವಿದೇಶಿಗರು, ಮೋದಿ ಅವರನ್ನು ಹಿರಿಯಣ್ಣನನ್ನಾಗಿ ಸ್ವೀಕರಿಸಿದ್ದಾರೆ. ವಿದೇಶಗಳ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಮೋದಿ ಕಾರ್ಯವೈಖರಿಯಿಂದ ಭಾರತ ಆರ್ಥಿಕವಾಗಿ ಸದೃಢವಾಗಿದೆ. ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿ ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಾರ್ಷಿಕ 3 ಸಾವಿರ ಕೋಟಿ ರೂ. ನೀಡಿದ್ದಾರೆ. ಜಿಲ್ಲೆಗೆ ವಿಶ್ವ ವಿದ್ಯಾಲಯ, ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ಅಂಜನಾದ್ರಿ ಬೆಟ್ಟಕ್ಕೆ 100 ಕೋಟಿ ರೂ. ನೀಡಿದ್ದಾರೆ.

ಮಾಜಿ ಸಚಿವ ಬಸವರಾಜ ರಾಯರಡ್ಡಿ, ನೀರಾವರಿ ಬಗ್ಗೆ ಏನೂ ಅರಿಯದೆ ತಾವೇ ನೀರಾವರಿ ಬ್ರಹ್ಮ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದಾರೆ. ಅವರಿಗೆ ರೈತಪರ ಕಾಳಜಿ ಇಲ್ಲ ಎಂದು ಟೀಕಿಸಿದರು.

4.95 ಕೋಟಿ ರೂ. ವೆಚ್ಚದಲ್ಲಿ ಹಿರೇಬೀಡಿನಾಳ, ಮುತ್ತಾಳ ರಾವಣಕಿ ರಸ್ತೆ ಅಭಿವೃದ್ಧಿ, 75 ಲಕ್ಷ ರೂ.ನಲ್ಲಿ ರಾವಣಕಿಯಲ್ಲಿ ಕೆರೆ ನಿರ್ಮಾಣ, 48 ಲಕ್ಷ ರೂ.ನಲ್ಲಿ ಕದ್ರಳ್ಳಿಯಲ್ಲಿ 4 ಶಾಲಾ ಕೊಠಡಿ ನಿರ್ಮಾಣ, 60 ಲಕ್ಷ ರೂ.ನಲ್ಲಿ ಹಿರೇಬೀಡಿನಾಳದಿಂದ ಚಿಕ್ಕ ಬೀಡಿನಾಳದವರೆಗೆ ಸಿಸಿ ರಸ್ತೆ, ಚರಂಡಿ ನಿರ್ಮಾಣ, 55 ಲಕ್ಷ ರೂ.ನಲ್ಲಿ ಕಿನ್ನಾಳ ಮಂಗಳೂರು ರಸ್ತೆ ಮರು ಡಾಂಬರೀಕರಣ, 42 ಲಕ್ಷ ರೂ. ವೆಚ್ಚದಲ್ಲಿ ಚಿಕ್ಕಬೀಡಿನಾಳದಲ್ಲಿ ಸಿಸಿ ರಸ್ತೆ, 20.8 ಲಕ್ಷ ರೂ.ನಲ್ಲಿ ಹೊನ್ನೂಣುಸಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ, ಹೈಮಾಸ್ಟ್ ದೀಪ ಅಳವಡಿಕೆ, 70 ಲಕ್ಷ ರೂ.ದಲ್ಲಿ ಹೊನ್ನೂಣುಸಿ ಮಂಗಳೂರು ರಸ್ತೆ ಮರು ಡಾಂಬರೀಕರಣ, 1.20 ಕೋಟಿ ರೂ.ನಲ್ಲಿ ಕುದರಿಮೋತಿಯಿಂದ ಮುರಾರ್ಜಿ ದೇಸಾಯಿ ಶಾಲೆಯವರೆಗೆ ರಸ್ತೆ ಸುಧಾರಣೆ, 1.50 ಕೋಟಿ ರೂ. ವೆಚ್ಚದಲ್ಲಿ ಕುದರಿಮೋತಿಯಿಂದ ಹೊನ್ನೂಣುಸಿಯವರೆಗೆ ಸಿಸಿ ರಸ್ತೆ, 31ಲಕ್ಷ ರೂ.ನಲ್ಲಿ ನೆಲಜೇರಿಯಲ್ಲಿ ಸಿಸಿ ರಸ್ತೆ, 15 ಲಕ್ಷದಲ್ಲಿ ನೆಲಜೇರಿಯಲ್ಲಿ 1 ಶಾಲಾ ಕೊಠಡಿ, 10 ಲಕ್ಷ ರೂ.ನಲ್ಲಿ ಮ್ಯಾದನೇರಿಯಲ್ಲಿ ಸಿಸಿ ರಸ್ತೆ, 1.30 ಕೋಟಿ ರೂ. ವೆಚ್ಚದಲ್ಲಿ ಕುದರಿಮೋತಿ-ಮ್ಯಾದನೇರಿ ರಸ್ತೆ ಸುಧಾರಣೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಮುಖರಾದ ರಥನ ದೇಸಾಯಿ, ರೇವಣಸಿದ್ದನಗೌಡ, ನಾಗರಾಜ ವೆಂಕಟಾಪುರ, ಶಂಭು ಜೋಳದ, ಬಸನಗೌಡ ತೊಂಡಿಹಾಳ, ಮುತ್ತಪ್ಪ ತೋಟದ ಇತರರಿದ್ದರು.