ಕುಕನೂರು: ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಶ್ರೀ ಗುಡ್ಡದ ಬಸವೇಶ್ವರ ಹಾರಥೋತ್ಸವ ಹಾಗೂ ಶ್ರೀ ಶರಣಬಸವೇಶ್ವರ 37ನೇ ವರ್ಷದ ಪುರಾಣ ಮಂಗಲೋತ್ಸವ ನಿಮಿತ್ತ 10 ಜೋಡಿಗಳ ವಿವಾಹ ಸೋಮವಾರ ಜರುಗಿತು.
ಸಾನ್ನಿಧ್ಯ ವಹಿಸಿದ್ದ ಕುಕನೂರಿನ ಶ್ರೀ ಅನ್ನದಾನೇಶ್ವರ ಶಾಖಾಮಠದ ಡಾ.ಮಹಾದೇವರ ಸ್ವಾಮೀಜಿ ಮಾತನಾಡಿ, ಜಾತಿ, ಮತ, ಪಂಥಗಳು ಒಗ್ಗಟ್ಟಿನಿಂದ ಕಾರ್ಯ ಮಾಡಿದರೇ ಇಂತಹ ಜಾತ್ರೆ ನಡೆಯಲು ಸಾಧ್ಯವಾಗುತ್ತದೆ.
ಬೆಣಕಲ್ ಗ್ರಾಮವು ಪ್ರತಿ ವರ್ಷ ಪುರಾಣ ಪ್ರವಚನ ಹಾಗೂ ಜಾತ್ರೆ ಆಚರಿಸುವ ಜತೆಗೆ ಸಮಾಜ ಕಾರ್ಯಗಳಲ್ಲೂ ಮುಂದಿದೆ. ಸಾಮೂಹಿಕ ವಿವಾಹ ಆಯೋಜಿಸಿ ಬಡವರ ಅರ್ಥಿಕ ಹೊರೆ ತಗ್ಗಿಸುತ್ತಿದೆ ಎಂದರು.
ಯಲಬುರ್ಗಾದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ, ಮೈನಹಳ್ಳಿ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಹಿರೇಸಿಂದೋಗಿಯ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಾತ್ರೆ ನಿಮಿತ್ತ ಬೆಳಗ್ಗೆ ಶ್ರೀ ಗುಡ್ಡದ ಬಸವೇಶ್ವರಗೆ ವಿಶೇಷ ಪೂಜೆ ಸಲ್ಲಿಸಿ ಮಹಾದಾಸೋಹಕ್ಕೆ ಚಾಲನೆ ನೀಡಲಾಯಿತು.