ಕುಕನೂರು: ಜಿಲ್ಲೆಯ ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಬೆಳೆವಿಮೆ ಅನ್ಯಾಯ, ಬೆಂಬಲ ಬೆಲೆ ನೀತಿ ಖಂಡಿಸಿ ಪಟ್ಟಣದ ಶಿರೂರು ವೀರಭದ್ರಪ್ಪ ವೃತ್ತದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಮುರಳೀಧರರಾವ್ ಕುಲಕರ್ಣಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ದೇವಪ್ಪ ಸೋಬಾನದ ಮಾತನಾಡಿ, ಪ್ರತಿ ವರ್ಷ ಸರ್ಕಾರ ಮುಂಗಾರಿನಲ್ಲಿ ಹೆಸರು, ಮೆಕ್ಕೆಜೋಳ ಬೆಳೆ ಸೇರಿ ಅನೇಕ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ, ಸರ್ಕಾರ ಕಟಾವು ಆರಂಭಕ್ಕೂ ಮೊದಲು ಬೆಂಬಲ ಬೆಲೆ ಕೇಂದ್ರ ಪ್ರಾರಂಭ ಮಾಡಬೇಕು. ಎಲ್ಲ ರೈತರು ಬೆಳೆಗಳನ್ನು ವರ್ತಕರಿಗೆ ಮಾರಾಟ ಮಾಡಿದ ನಂತರ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭವಾಗುತ್ತದೆ. ರೈತರಿಗೆ ಸಿಗಬೇಕಾದ ಬೆಳೆವಿಮೆ ಪರಿಹಾರದಲ್ಲಿ ದಲ್ಲಾಳಿಗಳ ಹಾವಳಿಯಿಂದ ಕೇವಲ ಶೇ.50 ಮತ್ತು ಶೇ.50 ಇನ್ಸೂರೇನ್ಸ್ ಕಂಪನಿವರು ಖಾಲಿ ಜಮೀನುಗಳಿಗೆ ಪರಿಹಾರ ಮಂಜೂರು ಮಾಡಿ ನಿಜವಾದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ.
ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಇಲ್ಲಿಯವರಿಗೂ ಸದನದಲ್ಲಿ ರೈತಪರ ಧ್ವ್ವನಿ ಎತ್ತಲು ವಿಫಲವಾಗಿದ್ದಾರೆ. ಕಳೆದ 40 ವರ್ಷಗಳಿಂದ ರೈತರಿಗಾಗಿ ಯಾವುದೇ ಕೆಲಸ ಮಾಡಿಲ್ಲ. ಎಪಿಎಂಸಿಯಲ್ಲಿ ಎಲ್ಲ ವರ್ತಕರು ವ್ಯಾಪಾರ ಮಾಡಬೇಕು. ಮಾಡದೆ ಇರುವಂತಹ ವರ್ತಕರ ಲೈಸನ್ಸ್ ರದ್ದು ಮಾಡಬೇಕು. ಎಪಿಎಂಸಿ ಅಧಿಕಾರಿಗಳು ಕಡ್ಡಾಯವಾಗಿ ಟೆಂಡರ್ ಪ್ರಕ್ರಿಯೆ ಪ್ರಾರಂಭ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಪಿಎಂಸಿಗೆ ಬೀಗ ಜಡಿಯಬೇಕಾಗುತ್ತದೆ ಎಂದರು.
ಎಪಿಎಂಸಿ ಕಾರ್ಯದರ್ಶಿ ಗುರುಸ್ವಾಮಿ ಗುಡಿ, ಪಿಎಸ್‌ಐ ಟಿ.ಗುರುರಾಜ, ರೈತ ಸಂಘದ ರಾಜ್ಯಉಪಾಧ್ಯಕ್ಷ ಅಂದಪ್ಪ ಹುರಳಿ, ಜಿಲ್ಲಾ ಕಾರ್ಯದರ್ಶಿ ವಜೀರಸಾಬ್ ತಳಕಲ್, ಶರಣಪ್ಪ, ನಗರ ಘಟಕದ ಅಧ್ಯಕ್ಷ ಶಿವು ಭಂಗಿ, ರೈತ ಮುಖಂಡರಾದ ಮಲಪ್ಪ ಚಳಮರದ, ಯಲಪ್ಪ ಕಲಾಲ, ಹನುಮಪ್ಪ ಮರಡಿ, ಕಳಕಪ್ಪ, ಗಂಗಮ್ಮ ಹುಡೇದ, ಶರಣಪ್ಪ ಚಂಡೂರು, ಶರಣಪ್ಪ ಯತ್ನಟ್ಟಿ, ಗವಿಸಿದ್ದಪ್ಪ ಜಿಜಿನ್, ಈಶಪ್ಪ ಸಬರದ, ಉಮೇಶ್ ಬೆದವಟ್ಟಿ, ಬಸವರಾಜ ದಿವಟರ, ಬಸವರಾಜ ಸಬರದ, ಹನುಮಪ್ಪ ಗೊರ್ಲೆಕೊಪ್ಪ, ಈರಪ್ಪ ಕುಡ್ಲೂರು, ಬಸವರಾಜ ಈಬೇರಿ, ಕಾಶೀಮಅಲಿ ಸಂಗಡಿ, ಬಸಪ್ಪ ಲಾಳಗೊಂಡರ, ಮಲ್ಲಪ್ಪ ಹೂಗಾರ, ಗವಿಸಿದ್ದಪ್ಪ ತಳಬಾಳ ಇತರರಿದ್ದರು.