ಕುಕನೂರು ತಾಲೂಕಿನ ಬಿನ್ನಾಳ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಮಹಾರಥೋತ್ಸವ ಜರುಗಿತು.  
ಜಿಲ್ಲೆ

ಬಿನ್ನಾಳ ಭಕ್ತಿ ಪ್ರಧಾನ ಗ್ರಾಮ

ಕುಕನೂರು: ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸುವ ಬಿನ್ನಾಳ ಭಕ್ತಿ ಪ್ರಧಾನ ಗ್ರಾಮವಾಗಿದೆ ಎಂದು ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ತಾಲೂಕಿನ ಬಿನ್ನಾಳ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವ ನಿಮಿತ್ತ ಸೋಮವಾರ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹಾರಥೋತ್ಸವದಲ್ಲಿ ಸೇರಿರುವ ಸಹಸ್ರ ಸಂಖ್ಯೆಯ ಭಕ್ತಗಣ ನೋಡಿದರೆ ಬಸವೇಶ್ವರನ ಮೇಲಿಟ್ಟಿರುವ ಗ್ರಾಮಸ್ಥರ ಭಕ್ತಿ ಎದ್ದು ಕಾಣುತ್ತಿದೆ. ಜಾತ್ರೆಗೆ ಟೊಂಕಕಟ್ಟಿ ಭಕ್ತಿ ಸೇವೆ ಮಾಡುತ್ತಿರುವ ಕಾರ್ಯ ಮಾದರಿ ಎಂದರು.

ಬಸವೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ನಾನಾ ಧಾರ್ಮಿಕ ಪೂಜೆ ಹಾಗೂ ಅಭಿಷೇಕ ನೆರವೇರಿತು. ಭಕ್ತರು ಪಾದಯಾತ್ರೆ ಮೂಲಕ ಬಿನ್ನಾಳಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ನೈವೆದ್ಯ ಅರ್ಪಿಸಿ ಹರಕೆ ತೀರಿಸಿದರು. ಸಂಜೆ ಅಪಾರ ಭಕ್ತ ಸಮೂಹದ ಮಧ್ಯೆರಥೋತ್ಸವ ಜರುಗಿತು. ದಾವಣಗೆರೆಯ ಶ್ರೀ ಬಸವಪ್ರಭು ಸ್ವಾಮೀಜಿ, ಹರ್ಲಾಪುರದ ಶ್ರೀ ಕೊಟ್ಟೂರೇಶ್ವರ ಸ್ವಾಮೀಜಿ, ಮೈನಳ್ಳಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹಾಗೂ ಹರಗುರುಚರಮೂರ್ತಿಗಳು ಸಾನ್ನಿಧ್ಯ ವಹಿಸಿದ್ದರು.

ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಗ್ರಾಪಂ ಅಧ್ಯಕ್ಷೆ ದಾಕ್ಷಾಯಣಿ ಸಂಗಪ್ಪ ತಹಸೀಲ್ದಾರ್, ಸದಸ್ಯರಾದ ಮಹ್ಮದ್‌ಸಾಬ್ ವಾಲಿಕಾರ, ಲಕ್ಷ್ಮಣ ಛಲವಾದಿ, ಪ್ರಮುಖರಾದ ಬಸವಂತಪ್ಪ ಕುಟಗನಹಳ್ಳಿ, ಭೀಮಪ್ಪ ಕುರಿ, ಬಸವರಾಜ ಬನ್ನಿಕೊಪ್ಪ, ಸಂತೋಷ್ ಮೆಣಸಿನಕಾಯಿ, ಚನ್ನಯ್ಯ ಹಿರೇಮಠ, ಸಿದ್ದಲಿಂಗಯ್ಯ ಹಿರೇಮಠ ಇತರರಿದ್ದರು.

ಭಕ್ತರ ಭಕ್ತಿಯಿಂದ ಬಿನ್ನಾಳ ದೈವಭೂಮಿಯಾಗಿದೆ. ಗ್ರಾಮಸ್ಥರ ಕಾಯಕಯೋಗ ಜಿಲ್ಲೆಗೆ ಮಾದರಿಯಾಗಿದೆ. ಕೃಷಿ ಕಾಯಕದಿಂದ ಛಾಪು ಮೂಡಿಸಿದ್ದಾರೆ. ಇಂಥ ನೆಲದಲ್ಲಿ ಜನ್ಮ ಪಡೆದಿರುವುದು ನಿಜಕ್ಕೂ ಪುಣ್ಯದ ಫಲ.ಕೆ.ರಾಜಶೇಖರ ಹಿಟ್ನಾಳ, ಸಂಸದ