ಕುಕನೂರು ಪ್ರವಾಸಿ ಮಂದಿರದಲ್ಲಿ ತಾಲೂಕು ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿದರು. ತಾಪಂ ಇಒ ಸಂತೋಷ ಬಿರಾದಾರ ಪಾಟೀಲ್, ತಹಸೀಲ್ದಾರ್ ಎಚ್.ಪ್ರಾಣೇಶ, ಯಲಬುರ್ಗಾ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಸುಧೀರ ಕೊರ್ಲಹಳ್ಳಿ, ಕುಕನೂರು ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ ಇತರರಿದ್ದರು.  
ಜಿಲ್ಲೆ

ಅನರ್ಹ ಫಲಾನುಭವಿಗಳಿಗೆ ಕಡಿವಾಣ

ಕುರುವತ್ತಿ ಶ್ರೀಕಾಂತಪ್ಪ

ಕುಕನೂರು: ಗ್ಯಾರಂಟಿ ಯೋಜನೆಗಳಲ್ಲಿ ಅನರ್ಹ ಫಲಾನುಭವಿಗಳು ಯೋಜನೆಯ ಲಾಭ ಪಡೆಯುತ್ತಿದ್ದು, ಈ ಬಗ್ಗೆ ತನಿಖೆ ಮಾಡಿ ಕಡಿವಾಣ ಹಾಕಲಾಗುವುದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಕುಕನೂರು, ಯಲಬುರ್ಗಾ ತಾಲೂಕಿನ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ವರ್ಷಕ್ಕೆ ಗ್ಯಾರಂಟಿ ಯೋಜನೆಯಡಿ ಅಂದಾಜು 250 ಕೋಟಿ ರೂ.ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿವೆ. ಆದರೆ ಗ್ಯಾರಂಟಿ ಯೋಜನೆಗಳಲ್ಲಿ ಅನರ್ಹರೂ ಯೋಜನೆ ಲಾಭ ಪಡೆಯತ್ತಿದ್ದಾರೆ. ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಅಧಿಕಾರಿಗಳ ತಂಡ ರಚಿಸಿ ತನಿಖೆ ಮಾಡಲು ಮುಖ್ಯಮಂತ್ರಿಗೆ ತಿಳಿಸಲಾಗುವುದು.

ಮನೆ ಬಾಡಿಗೆ ನೀಡಿದ್ದರೂ ಸಹ ಅವರಿಗೆ ಉಚಿತ ಗೃಹಜ್ಯೋತಿ ಯೋಜನೆ ದೊರೆಯುತ್ತಿದೆ. ಗೃಹಲಕ್ಷ್ಮೀ ಯಲ್ಲಿ ಟ್ಯಾಕ್ಸ್, ಜಿಎಸ್‌ಟಿ ಹೊಂದಿದ ಕುಟುಂಬದ ಸದಸ್ಯರಿಗೆ ಹಣ ನೀಡಲಾಗುತ್ತಿದೆ. ಅನ್ನಭಾಗ್ಯದಲ್ಲಿ ಯಲಬುರ್ಗಾ ಕ್ಷೇತ್ರದಲ್ಲಿ ಪಡಿತರ ಕಾರ್ಡ್‌ಗಳ ವ್ಯತ್ಯಾಸ ಗೋಚರಿಸುತ್ತಿದೆ. ಇಂತಹ ಪ್ರಕರಣ ರಾಜ್ಯದ ತುಂಬಾ ತನಿಖೆ ಮಾಡಿಸಲಾಗುವುದು. ಜುಲೈನಿಂದ ಅನರ್ಹರಿಗೆ ಯೋಜನೆ ದೊರೆಯುವುದಿಲ್ಲ . ಯಲಬುರ್ಗಾ, ಕುಕನೂರು ತಾಲೂಕಿಗೆ ಗ್ಯಾರಂಟಿ ಯೋಜನೆಯಲ್ಲಿ ಎರಡು ವರ್ಷಕ್ಕೆ ಸುಮಾರು 400ಕೋಟಿ ರೂ. ಹಣ ಬಂದಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಇಡೀ ರಾಷ್ಟ್ರದಲ್ಲಿ ಗ್ಯಾರಂಟಿ ಯೋಜನೆ ನೀಡಿ ಉತ್ತಮ ಜನಮನ್ನಣೆ ಗಳಿಸಿದೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ ಖಾಸಿಂಸಾಬ್ ತಳಕಲ್, ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪ, ಆಹಾರ ಇಲಾಖೆ ಅಧಿಕಾರಿ ಮಲ್ಲಯ್ಯ, ಜೆಸ್ಕಾಂ ಅಧಿಕಾರಿ ನಾಗರಾಜ ಇತರರಿದ್ದರು.

ಹಣದ ಬದಲು ಆಹಾರ ಧಾನ್ಯದ ಕಿಟ್ ವಿತರಣೆ: ಅನ್ನಭಾಗ್ಯ ಯೋಜನೆಯಲ್ಲಿ 10ಕೆಜಿ ಪಡಿತರ ಧಾನ್ಯದಲ್ಲಿ 5 ಕೇಜಿ ಅಕ್ಕಿ ಜೊತೆಗೆ 5 ಕೇಜಿ ಪಡಿತರದ 150 ರೂ.ಯನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿತ್ತು. ಆದರೆ ಹಣ ನೀಡುವ ಬದಲು ತೊಗರಿ ಬೇಳೆ, ಕೊಬ್ಬರಿ ಎಣ್ಣೆ, ಸಕ್ಕರೆ, ಜೋಳ ಹೀಗೆ ಆಹಾರ ಧ್ಯಾನದ ಕಿಟ್ ಮಾಡಿ ವಿತರಣೆ ಮಾಡುವ ಯೋಚನೆ ಇದೆ. ಇದನ್ನು ರಾಜ್ಯ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.

ಬಸವರಾಜ ರಾಯರಡ್ಡಿ ಶಾಸಕರು, ಯಲಬುರ್ಗಾ.