BASAVARAJA-RAYARADDY. 
ಜಿಲ್ಲೆ

ಮಕ್ಕಳು ಗುಣಮಟ್ಟ ಶಿಕ್ಷಣ ಪಡೆಯಲಿ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿಕೆ

ಕುಕನೂರು: ಯಲಬುರ್ಗಾ, ಕುಕನೂರು ತಾಲೂಕಿನ 19 ಪ್ರೌಢಶಾಲೆಗಳಿಗೆ ನೂತನ ಕಟ್ಟಡ ಮಂಜೂರುಗೊಂಡಿವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಸೋಂಪೂರು ಗ್ರಾಮದಲ್ಲಿ ನೂತನ ಸರ್ಕಾರಿ ಪ್ರೌಢಶಾಲೆ ಉದ್ಘಾಟಿಸಿ ಬುಧವಾರ ಮಾತನಾಡಿದರು. ಇನ್ನೂ ಎರಡು ದಿನದಲ್ಲಿ ಇನ್ನೊಂದು ಪ್ರೌಢಶಾಲೆ ಮಂಜೂರಾಗಲಿದೆ. ಈ ಹಿಂದೆ ಶಾಸಕನಾಗಿದ್ದಾಗ ಎರಡು ಪ್ರೌಢಶಾಲೆ ಮಂಜೂರು ಮಾಡಿಸಿದ್ದೆ. ಆದರೆ ಈ ಹಿಂದೆ ಅಧಿಕಾರದಲ್ಲಿದ್ದವರು ಎರಡೂ ಪ್ರೌಢಶಾಲೆಗೆ ಕಟ್ಟಡ ನಿರ್ಮಾಣ ಮಾಡಿಲ್ಲ.

ಇದರಿಂದ ಈ ಬಾರಿ 19 ಪ್ರೌಢಶಾಲೆಗೆ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ. ಪ್ರತಿ ಪ್ರೌಢಶಾಲೆ ಕಟ್ಟಡಕ್ಕೆ 2.5 ಕೋಟಿ ರೂ.ಅನುದಾನ ಒದಗಿಸಲಾಗಿದೆ. ಇದರಿಂದ ಮಕ್ಕಳು ಗುಣಮಟ್ಟ ಶಿಕ್ಷಣ ಹಾಗೂ ಸ್ಥಳೀಯವಾಗಿಯೇ ಪ್ರೌಢ ಶಿಕ್ಷಣ ಪಡೆಯುತ್ತಾರೆ ಎಂದರು.

ಶಾಲೆ ಕಟ್ಟಡ ನಿರ್ಮಿಸಲು ಗ್ರಾಮಸ್ಥರು ಜಮೀನನ್ನು ದಾನ ನೀಡಬೇಕು. ಆದರೆ ಸದ್ಯ ಯಾರೂ ದಾನ ನೀಡಲು ಮುಂದೆ ಬರುತ್ತಿಲ್ಲ. ಹಾಗಾಗಿ ಸಿಎಂಗೆ ಹೇಳಿ ವಿಶೇಷವೆಂಬಂತೆ ಯಲಬುರ್ಗಾ ಕ್ಷೇತ್ರದಲ್ಲಿ ಮಾತ್ರ ಶಾಲೆ ಕಟ್ಟಡ ಜಾಗವನ್ನು ಸರ್ಕಾರಿ ಬೆಲೆ ಪ್ರಕಾರ ಖರೀದಿಸಲಾಗುತ್ತಿದೆ. ಕ್ಷೇತ್ರದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೋಸ್ಕರ ಶಾಲೆ, ಕಾಲೇಜು, ವಸತಿ ಶಾಲೆ, ಹಾಸ್ಟೆಲ್‌ಗಳನ್ನು ಮಂಜೂರು ಮಾಡಿಸಿದ್ದೇನೆ ಎಂದರು.

ಡಿಡಿಪಿಐ ಶ್ರೀಶೈಲ ಬಿರಾದಾರ, ಬಿಇಒ ಸೋಮಶೇಖರಗೌಡ ಪಾಟೀಲ್, ತಾಪಂ ಇಒ ಸಂತೋಷ ಪಾಟೀಲ್ ಬಿರಾದಾರ ಇತರರಿದ್ದರು.