ದ್ಯಾಂಪೂರದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮನೆ ಮನೆಯಲ್ಲಿ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ವಿತರಿಸಲಾಯಿತು. ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ, ಅನ್ನದಾನೀಶ್ವರ ಶಾಖಾಮಠದ ಡಾ.ಮಹಾದೇವ ಸ್ವಾಮೀಜಿ, ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ, ನಿವೃತ್ತ ಮುಖ್ಯಶಿಕ್ಷಕಿ ರತ್ನಮ್ಮ ರತ್ನಾಕರ ಇತರರಿದ್ದರು. 
ಜಿಲ್ಲೆ

ವೈದಿಕ ಧರ್ಮದಿಂದ ನಿರಂತರ ಶೋಷಣೆ

ಕುಕನೂರು: ಮಹಿಳೆಯರು ಮೌಢ್ಯವನ್ನು ತೊರೆದು ವೈಚಾರಿಕ ಜಾಗೃತಿ ಮೂಡಿಸಲಿ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ ಹೇಳಿದರು.

ತಾಲೂಕಿನ ದ್ಯಾಂಪೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಶ್ರೀ ಕಾವ್ಯಾನಂದ ಮಹಿಳಾ ಅಭಿಮಾನಿ ಬಳಗ, ಮಾನವ ಬಂಧುತ್ವ ವೇದಿಕೆಯಿಂದ ಭಾನುವಾರ ಆಯೋಜಿಸಿದ್ದ ‘ಮನೆ ಮನೆಯಲ್ಲಿ ಬಸವ ಪಂಚಮಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಅನಾದಿ ಕಾಲದಿಂದಲೇ ಮೌಢ್ಯಗಳನ್ನು ಬಿತ್ತುವ ಕಾರ್ಯ ನಡೆಯುತ್ತಿದೆ. ವೈದಿಕ ಧರ್ಮ ನಿರಂತರವಾಗಿ ಇಂಥ ಶೋಷಣೆ ಮಾಡುತ್ತಾ ಬಂದಿದೆ. ನಾಗರ ಹಾವಿನ ಹುತ್ತಕ್ಕೆ ಹಾಲು ಹಾಕುವುದರಿಂದ ಲಕ್ಷಾಂತರ ಲೀಟರ್ ಹಾಲು ಹಾಳಾಗುತ್ತಿದೆ.

ಹಾವು ಮಾಂಸಹಾರಿಯಾಗಿದ್ದು, ಹಾಲು ಕುಡಿಯುವುದಿಲ್ಲ. ಇದನ್ನು ಜನರಲ್ಲಿ ಮೂಢನಂಬಿಕೆ ಬಿತ್ತಿದ್ದರಿಂದ ಇಂದಿಗೂ ಇಂಥ ಆಚರಣೆ ಬಿಡುತ್ತಿಲ್ಲ. ಬಸವಣ್ಣನವರು ಮೌಢ್ಯ, ಕಂದಾಚಾರಗಳನ್ನು ವಿರೋಧ ಮಾಡಿದರು ಎಂದರು.

ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ ಮಾತನಾಡಿ, ಸಾಮಾಜಿಕ ಸಾಮರಸ್ಯ ಬೆಳೆಯಲು ಬಸವ ಪಂಚಮಿ ಕಾರ್ಯಕ್ರಮ ಪ್ರಮುಖವಾಗಿದೆ. ಬಂಧುತ್ವ ವೇದಿಕೆ ಮೌಢ್ಯ, ಕಂದಾಚಾರ ವಿರೋಧಿ ಜಾಗೃತಿ ಮೂಡಿಸುತ್ತದೆ.ಮನುಷ್ಯ ಹಸಿದವರ ಜತೆಗೆ ನಿಲ್ಲಬೇಕು. ಉಂಡವರ ಜತೆ ಅಲ್ಲ ಎಂದರು.

ಅನ್ನದಾನೀಶ್ವರ ಶಾಖಾಮಠದ ಡಾ.ಮಹಾದೇವ ಸ್ವಾಮೀಜಿ ಹಾಗೂ ನಿವೃತ್ತ ಮುಖ್ಯ ಶಿಕ್ಷಕಿ ರತ್ನಮ್ಮ ರತ್ನಾಕರ ತಳವಾರ ಮಾತನಾಡಿದರು.

ನಿವೃತ್ತ ಅಧಿಕಾರಿ ಸಿದ್ದಮ್ಮ ಪಾಟೀಲ್, ಎಸ್ಡಿಎಂಸಿ ಅಧ್ಯಕ್ಷ ಶಿವಬಸಪ್ಪ ನೋಟಗಾರ, ವಿಸ್ತಾರ ಸಂಸ್ಥೆ ಸಹ ನಿರ್ದೇಶಕ ಡಾ.ನಾಜರ್ ಪಿ.ಎಸ್., ಗ್ರಾಪಂ ಅಧ್ಯಕ್ಷೆ ಮಂಜುಳಾ ಮಾಲಗಿತ್ತಿ, ಸದಸ್ಯೆ ಬುಡ್ಡಮ್ಮ ಮರಡಿ, ಪ್ರಮುಖರಾದ ಪ್ರೇಮಾ ಎಸ್.ಮುದಗಲ್, ಸರೋಜಾ ಬಾಕಳೆ, ಸಾವಿತ್ರಿ ಮರಡಿ, ಗಂಗಮ್ಮ ಹುಡೇದ, ಅನ್ನಪೂರ್ಣಮ್ಮ ಹುಣಸಿಮರದ ಇತರರಿದ್ದರು.