ಕುಕನೂರು : ಕಲ್ಯಾಣ ಕರ್ನಾಟಕದ ಬಹುಪಾಲು ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲಾಗಿದೆ. ಅದರಲ್ಲೂ ಶಾಸಕ ಬಸವರಾಜ ರಾಯರಡ್ಡಿ ಅವರು ಶೈಕ್ಷಣಿಕವಾಗಿ ಹೆಚ್ಚು ಒತ್ತು ನೀಡಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ತಾಲೂಕಿನ ದ್ಯಾಂಪೂರು ಗ್ರಾಮದಲ್ಲಿ ಕೆಕೆಆರ್‌ಡಿಬಿಯ 2 ಕೋಟಿ ರೂ.ಅನುದಾನದಲ್ಲ್ಲಿ ನಿರ್ಮಿಸಿರುವ ಸರ್ಕಾರಿ ಪ್ರೌಢಶಾಲೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಶಾಸಕ ಬಸವರಾಜ ರಾಯರಡ್ಡಿ ಅವರು ನನ್ನ ಇಲಾಖೆಯಿಂದ ಹೊರತುಪಡಿಸಿ ಕಲ್ಯಾಣ ಕರ್ನಾಟಕ ಅನುದಾನವನ್ನು ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ. ಈ ಹಿಂದೆ ತಂದೆಯವರು ರೈತರಿಗೆ ಉಚಿತ ವಿದ್ಯುತ್ ನೀಡಿದ್ದರು. ಈಗ ಸಿಎಂ ಸಿದ್ದರಾಮಯ್ಯ ಅವರು ಬಡವರ ಮನೆಗಳಿಗೆ ಉಚಿತ ವಿದ್ಯುತ್ ನೀಡುವ ಬೆಳಕಾಗಿದ್ದಾರೆ ಎಂದರು.
ಈ ಹಿಂದೆ ಮಕ್ಕಳು ಕಾಫಿ ಹೊಡೆದು ಪಾಸ್ ಆಗುವ ಸಾಧ್ಯತೆ ಇತ್ತು. ಅದಕ್ಕೆ ಈಗ ಬ್ರೇಕ್ ಹಾಕಲಾಗಿದೆ. ಅದರಿಂದ ಸಾಕ್ಷರತಾ ಪ್ರಮಾಣ ಹೆಚ್ಚಾಗಿದೆ. ಹಿಂದಿನ ಸರ್ಕಾರ ಶಿಕ್ಷಕರ ನೇಮಕಾತಿ ಮಾಡಲಿಲ್ಲದಿದ್ದರಿಂದ ಶಿಕ್ಷಕರ ಕೊರತೆ ಇತ್ತು. ಈಗ 13000 ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಕಕ ಭಾಗದ ಶೇ.80 ಬೋಧಕರ ಕೊರತೆ ನೀಗಿದೆ. ಅಗತ್ಯತೆಗೆ ಅನುಗುಣವಾಗಿ ಕರ್ನಾಟಕ ಪಬ್ಲಿಕ್ ಸೂಲ್ಕ್‌ಗೆ ಶಾಲಾ ವಾಹನ ವ್ಯವಸ್ಥೆ ಮಾಡಲಾಗುವುದು. ಶೀಘ್ರದಲ್ಲಿ ಶಿಕ್ಷಕರ ಹಾಜರಾತಿ ಡಿಜಿಟಲೀಕರಣ ಮಾಡಿ ಫೇಸ್ ಹಾಜರಾತಿ ಕಡ್ಡಾಯ ಮಾಡಲಾಗುವುದು ಎಂದರು.
ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿ ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಹಣದ ಹೊಂದಾಣಿಕೆ ಆದರೆ ಪುರುಷರಿಗೂ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುವ ಚಿಂತನೆ ಇದೆ. ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ ಎಂಬುದು ಸುಳ್ಳು. ಗ್ಯಾರಂಟಿ ಯೋಜನೆಗಳನ್ನು ಇನ್ನೂ ಹೆಚ್ಚಿಗೆ ಮಾಡಲಾಗುವುದು. ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ರಾಜ್ಯ ಜಿಎಸ್‌ಟಿ ಸಂಗ್ರಹದಲ್ಲಿ 2ನೇ ಸ್ಥಾನದಲ್ಲಿದೆ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಿದ್ದಾರೆ. ಗ್ಯಾರಂಟಿ ಮುಂದುವರೆಯಲಿವೆ. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಳನ್ನು ಮುಂದಿನ ವರ್ಷದಿಂದ ಮಾಡುತ್ತೇನೆ ಎಂದು ಹೇಳಿದ್ದನ್ನು ನಕಾರಾತ್ಮಕವಾಗಿ ಬಿಂಬಿಸಲಾಗಿದೆ ಎಂದು ಪತ್ರಕರ್ತರ ಮೇಲೆ ಅಸಮಾಧಾನ ಹೊರಹಾಕಿದರು.
ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಬಿಎಸ್ಸಿ ತೋಟಗಾರಿಕೆ ಪದವಿಯಲ್ಲಿ ರ‌್ಯಾಂಕ್‌ಗಳಿಸಿ 16 ಚಿನ್ನದ ಪದಕ ಪಡೆದ ತಳಬಾಳ ಗ್ರಾಮದ ಭೀಮವ್ವ ಕರ್ಕಿಹಳ್ಳಿ ಸನ್ಮಾನಿಸಲಾಯಿತು. ಡಿಡಿಪಿಐ ಶ್ರೀಶೈಲ ಬಿರಾದಾರ, ಬಿಇಒ ಸೋಮಶೇಖರಗೌಡ ಪಾಟೀಲ, ತಾಪಂ ಇಒ ಸಂತೋಷ ಬಿರಾದಾರ, ಗ್ರಾಪಂ ಅಧ್ಯಕ್ಷೆ ಮಂಜುಳಾ, ಪ್ರಮುಖರಾದ ಚಂದ್ರಶೇಖರಯ್ಯ ಹಿರೇಮಠ, ಕೆರಿಸಬಪ್ಪ ನಿಡಗುಂದಿ, ಮಂಜುನಾಥ ಕಡೇಮನಿ, ಖಾಸಿಂಸಾಬ್ ತಳಕಲ್, ಬಸವರಾಜ ಮಾಸೂರು, ಅಂದಾನಗೌಡ, ಈರಪ್ಪ ಕುಡಗುಂಟಿ ಇತರರಿದ್ದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿದ ಇಲಾಖೆಗಳ ಮೂಲಕ ಕಾಮಗಾರಿ ಪ್ರಾರಂಭಿಸಿ, ಹಣ ಪಾವತಿಸಿಲ್ಲ. ಹೀಗಾಗಿ 2.47 ಲಕ್ಷ ಕೋಟಿ ರೂ. ಪಾವತಿಸುವುದು ಸರ್ಕಾರದ ಮೇಲಿದೆ. ಕೇಂದ್ರ ಸರ್ಕಾರದಿಂದ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಕೇವಲ 500 ಕೋಟಿ ರೂ. ಮಾತ್ರ ಮಂಜೂರಾಗುತ್ತದೆ. ಉಳಿದದ್ದು ರಾಜ್ಯ ಸರ್ಕಾರವೇ ಭರಿಸುತ್ತದೆ. ಪಿಎಂ ಮೋದಿ ಉಳಿದ ಹಣ ನೀಡಿಲ್ಲ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು. ದ್ಯಾಂಪೂರುದಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ರಾಷ್ಟ್ರದಲ್ಲಿಯೇ ಬೆಸ್ಟ್ ಸಿಎಂ. ಜನಪ್ರಿಯತೆ ಹೊಂದಿರುವ ಅವರು ಮಾಸ್ ಲೀಡರ್ ಆಗಿದ್ದಾರೆ. ಅವರನ್ನು ಸಿಎಂ ಸ್ಥಾನದಿಂದ ತೆಗೆಯಲು ಯಾರಿದಂದಲೂ ಸಾಧ್ಯವಿಲ್ಲ. ಸಚಿವ ಪರಮೇಶ್ವರ ಅವರ ನೇತೃತ್ವದಲ್ಲಿ ಚುನಾವಣೆ ಪ್ರಣಾಳಿಕೆ ಸಿದ್ಧವಾಗಿದ್ದವು. ಅವುಗಳನ್ನು ಯಥಾವತ್ತಾಗಿ ಜನರಿಗೆ ತಲುಪಿಸಿದ್ದೇವೆ ಎಂದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಒಂದೇ ಒಂದು ನೂತನ ಪ್ರೌಢ ಶಾಲೆ ಹಾಗೂ ಜೂನಿಯರ್ ಕಾಲೇಜು ನಿರ್ಮಾಣ ಮಾಡಿಲ್ಲ. ರಾಜ್ಯದಲ್ಲಿ 100 ಕ್ಕೂ ಅಧಿಕ ಪ್ರೌಢ ಶಾಲೆ ಹಾಗೂ 50 ಜೂನಿಯರ್ ಕಾಲೇಜುಗಳನ್ನು ಸರ್ಕಾರ ಮಂಜೂರಾತಿ ನೀಡುತ್ತಿದೆ. 500 ಕೆಪಿಎಸ್ ಶಾಲೆಗಳಲ್ಲಿ ಪ್ರತಿ ಕ್ಷೇತ್ರಕ್ಕೆ ಎರಡು ಶಾಲೆಗಳನ್ನು ನೀಡಲಾಗುತ್ತಿದೆ. ಯಲಬುರ್ಗಾ ಕ್ಷೇತ್ರಕ್ಕೆ ಕಾರ್ಮಿಕ ಮಕ್ಕಳಿಗೆ ವಸತಿ ಶಾಲೆ, ಶಿರೂರು ಗ್ರಾಮಕ್ಕೆ ಜೂನಿಯರ್ ಕಾಲೇಜ್, ನೆಲಜೇರಿಗೆ ಪ್ರೌಢಶಾಲೆ ಮಂಜೂರಾಗಿದೆ. ಕಕ ಅನುದಾನದಲ್ಲಿ ಪ್ರತಿ ಶಾಲೆಗೆ ಹಾಗೂ ವಸತಿ ಶಾಲೆಗಳಿಗೆ ಫರ್ನಿಚರ್ ಸೌಲಭ್ಯಕ್ಕೆ 25 ಕೋಟಿ ಅನುದಾನ ನೀಡಲಾಗಿದೆ. | ಬಸವರಾಜ ರಾಯರಡ್ಡಿ ಸಿಎಂ ಆರ್ಥಿಕ ಸಲಹೆಗಾರ ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ 16 ಚಿನ್ನದ ಪದಕ ಪಡೆದ ಕುಕನೂರು ಗ್ರಾಮದ ತಳಬಾಳ ಗ್ರಾಮದ ಭೀಮವ್ವ ಕರ್ಕಿಹಳ್ಳಿ ಅವರನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಸಿಎಂ ಆರ್ಥಿಕ ಸಲಹೆಗಾರರ ಬಸವರಾಜ ಅವರು ದ್ಯಾಂಪೂರು ಕಾರ್ಯಕ್ರಮದಲ್ಲಿ ಸನ್ಮಾನಿಸಿದರು.