ಕುಕನೂರು: ಗ್ರಾಪಂ ಅಧಿಕಾರಿ ಹಾಗೂ ಸಿಬ್ಬಂದಿ ಕುಡಿವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಪ್ರತಿ ಮನೆಗೂ ಕುಡಿವ ನೀರು ಒದಗಿಸಬೇಕು ಎಂದು ಜಿಪಂ ಸಿಇಒ ವರ್ಣೀತ್ ನೇಗಿ ಹೇಳಿದರು.
ತಾಲೂಕಿನ ಇಟಗಿ ಗ್ರಾಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಹಾಗೂ ಗ್ರಾಪಂ ಸದಸ್ಯರೊಂದಿಗೆ ಸಭೆ ನಡೆಸಿ ಮಂಗಳವಾರ ಮಾತನಾಡಿದರು.
ಐಪಿಎಎಪಿ ಸಮಗ್ರ ಸಹಭಾಗಿತ್ವದ ಯೋಜನೆಯನ್ನು ಶೀಘ್ರವಾಗಿ ಮುಕ್ತಾಯ ಮಾಡಿದಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಶೀಘ್ರವಾಗಿ ಬರುತ್ತದೆ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸ್ವಚ್ಛ ವಾಹಿನಿ ಡ್ರೈವರ್‌ಗಳು ಮಹಿಳೆಯರೇ ಆಗಿರಬೇಕೆಂಬ ಆದೇಶವಿದ್ದು, ಅದರಂತೆ ಮಹಿಳಾ ಡ್ರೈವರ್ ನಿಯೋಜನೆ ಮಾಡಬೇಕು. ಕುಡಿಯುವ ನೀರು ಸರಬರಾಜು ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು.
ಅದಕ್ಕೆ ಜನ ಪ್ರತಿನಿಧಿಗಳು ಪೈಪ್‌ಲೈನ್ ಸಮಸ್ಯೆ, ಜೆಜೆಎಂ ನಲ್ಲಿಯ ಮೂಲಕ ಪ್ರತಿ ಮನೆಗೂ ನೀರು ಸರಬರಾಜು ಆಗಬೇಕು. ವಸತಿ ರಹಿತ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಲು ವಸತಿ ರಹಿತ ಕುಟುಂಬಗಳ ಮಾಹಿತಿಯನ್ನು ಆರ್‌ಜಿಆರ್‌ಎಚ್‌ಸಿಎಲ್ ವೆಬ್‌ಸೈಟ್‌ನಲ್ಲಿ ಮಾಹಿತಿ ಒದಗಿಸಬೇಕು ಎಂದರು.
ನಂತರ ಗ್ರಾಪಂ ಗ್ರಂಥಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಹಿಂದುಳಿದ ವರ್ಗದ ವಸತಿ ನಿಲಯಕ್ಕೆ ಭೇಟಿ ನೀಡಿದರು.