ಪೊಲೀಸ್ ಇಲಾಖೆಯಿಂದ ಧರ್ಮದ ಜೋಳಿಗೆ ಕಾರ್ಯಕ್ರಮ | ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತ
ಕುಕನೂರು: ತಾಲೂಕಿನ ಪಟ್ಟಣದ ಠಾಣೆ ವ್ಯಾಪ್ತಿಯ 49 ಗ್ರಾಮದ 800ಕ್ಕೂ ಹೆಚ್ಚು ಬಡವರಿಗೆ ಧರ್ಮದ ಜೋಳಿಗೆ ಕಾರ್ಯದಿಂದ ದಿನಸಿ ಮುಟ್ಟಿದೆ.
ಪಟ್ಟಣದ ಎಪಿಎಂಸಿಯಲ್ಲಿ ಅನ್ನದ ಜೋಳಿಗೆ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆ ಮೇ 1 ರಿಂದ ಆರಂಭಿಸಿತ್ತು. ಇದಕ್ಕೆ ಅಪಾರ ಪ್ರಮಾಣದಲ್ಲಿ ಜನರ ಸಹಕಾರ ವ್ಯಕ್ತವಾಗಿದ್ದು, ಕಾಳು-ಕಡಿ ಹರಿದುಬಂದಿತ್ತು. ಪೊಲೀಸರು ಪ್ರತಿ ಗ್ರಾಮಕ್ಕೆ ತೆರಳಿ ಕಡುಬಡವರನ್ನು ಗುರುತಿಸಿ, ದಿನಸಿ ಪಡೆಯಲು ಚೀಟಿ ನೀಡಿ ಬಂದಿದ್ದರು. ಪ್ರತಿ ಗ್ರಾಮದಿಂದ 10 ಜನರಂತೆ ಮತ್ತು ಪಟ್ಟಣದ 19 ವಾರ್ಡ್‌ನಲ್ಲಿ 200ಕ್ಕೂ ಹೆಚ್ಚು ಜನ ದಿನಸಿ ತೆಗೆದುಕೊಂಡು ಹೋಗಿದ್ದಾರೆ. ಪೌರ ಕಾರ್ಮಿಕರು, ಆರೋಗ್ಯ ಇಲಾಖೆ ಡಿ ಗ್ರುಪ್ ಸಿಬ್ಬಂದಿ, ಹೋಂ ಗಾರ್ಡ್ಸ್ ಸಿಬ್ಬಂದಿಗೆ ದಿನಸಿ ಸಾಮಗ್ರಿ ತಲುಪಿಸಿದ್ದಾರೆ.
ಜನರ ಶ್ಲಾಘನೆ : ಪೊಲೀಸ್ ಠಾಣೆಯ ಪಿಎಸ್‌ಐ ಎನ್. ವೆಂಕಟೇಶ ಆರಂಭಿಸಿದ ಧರ್ಮದ ಜೋಳಿಗೆ ಕಾರ್ಯಕ್ರಮವನ್ನು ಜನ ಶ್ಲಾಘಿಸಿದ್ದಾರೆ. ಇದಕ್ಕೂ ಮೊದಲುಪ್ರತಿ ಗ್ರಾಮದ ಮೂವರಂತೆ 49 ಹಳ್ಳಿಗಳಲ್ಲಿ ಸ್ವ ಖರ್ಚಿನಲ್ಲಿ ದಿನಸಿ ವಿತರಿಸಿ ಮಾನವೀಯತೆ ಮೆರೆದಿದ್ದ ಪಿಎಸ್‌ಐ, ಈಗ ಧರ್ಮದ ಜೋಳಿಗೆ ಆರಂಭಿಸಿ, 800 ಕಡು ಬಡವರಿಗೆ ಆಹಾರ ಧಾನ್ಯ ತಲುಪಿಸಿದ್ದಾರೆ.