ಜಿಲ್ಲೆ

ಬ್ರಹ್ಮಶ್ರೀಗಳ ತತ್ವಾದರ್ಶ ಮೈಗೂಡಿಸಿಕೊಳ್ಳಿ: ಸಚಿವ ಹಾಲಪ್ಪ ಆಚಾರ್ ಸಲಹೆ

ಕುಕನೂರು: ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿನ ಮೌಢ್ಯ ಅಳಿಸಿ ಬೆಳಕು ನೀಡಿದ್ದಾರೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

ಪಟ್ಟಣದ ವಿದ್ಯಾನಂದ ಗುರುಕುಲದ ಭೀಮಸೇನೆ ದೇಸಾಯಿ ಸ್ಮಾರಕ ಭವನದಲ್ಲಿ ಯಲಬುರ್ಗಾ, ಕುಕನೂರು ತಾಲೂಕು ಆರ್ಯ ಈಡಿಗ ಸಂಘ ಏರ್ಪಡಿಸಿದ್ದ 168ನೇ ಬ್ರಹ್ಮಶ್ರೀನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು. ನಾರಾಯಣ ಗುರುಗಳ ಬದುಕು ಒಂದು ಸನಾತನ ಧರ್ಮವೇ ಅಂದರೆ ತಪ್ಪಾಗಲಾರದು. ವಿಶ್ವಕ್ಕೆ ಧರ್ಮದ ಹಾದಿ ತೋರಿಸಿದ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಸಮಾಜಕ್ಕೆ ಆರ್ಯ ಈಡಿಗರ ಕೊಡುಗೆ ಅಪಾರವಾಗಿದೆ ಎಂದರು. ಮುಖಂಡ ವೀರಣ್ಣ ಹುಬ್ಬಳ್ಳಿ ಮಾತನಾಡಿದರು. ಹುಂಚದಕಟ್ಟಿ ನಿಟ್ಟೂರು ನಾರಾಯಣ ಗುರುಗಳಪೀಠ ಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಅನ್ನದಾನೀಶ್ವರ ಶಾಖಾಮಠದ ಮಹಾದೇವ ದೇವರು ಸಾನ್ನಿಧ್ಯ ವಹಿಸಿದ್ದರು.

ಸಂಘದ ಜಿಲ್ಲಾಧ್ಯಕ್ಷ ಮಹಾಂತೇಶ, ಗುತ್ತಿಗೆದಾರ ಪ್ರದೀಪ ಶೇಟ್, ಯಲಬುರ್ಗಾ ಸಂಘದ ಅಧ್ಯಕ್ಷ ಮಂಜುನಾಥ ಈಳಗೇರ, ಕುಕನೂರು ತಾಲೂಕಾಧ್ಯಕ್ಷ ವೆಂಕಟೇಶ ಈಳಗೇರ, ಮುಖಂಡರಾದ ನಾಗರಾಜ ಎಸ್., ಈರಣ್ಣ ಈಳಗೇರ, ಹನುಮಂತಪ್ಪ ಹಂಪನಾಳ, ಬಸವನಗೌಡ ತೊಂಡಿಹಾಳ, ಶರಣಪ್ಪ ಈಳಗೇರ, ಗಿರೀಶ್, ರಾಮಣ್ಣ ಚನಪನಹಳ್ಳಿ ಇತರರಿದ್ದರು. ಇದಕ್ಕೂ ಮುನ್ನ ಬ್ರಹ್ಮಶ್ರೀಗಳ ಹಾಗೂ ಡಾ.ಪುನೀತ್ ರಾಜಕುಮಾರ್ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.