ಕುಕನೂರು: ಯಲಬುರ್ಗಾ ಕ್ಷೇತ್ರದಲ್ಲಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರದ ಕೊರೆತೆಯಾಗದಂತೆ ಎಚ್ಚರ ವಹಿಸಲಾಗಿದೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ತಾಲೂಕು ಸಹಾಯಕ ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿನ ಬೀಜ ವಿತರಣೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ರಾಜ್ಯ ಸರ್ಕಾರ ರೈತರಿಗೆ ಬಿತ್ತನೆಗೆ ಅವಶ್ಯವಾಗಿರುವ ಬೀಜ, ಗೊಬ್ಬರದ ಪೂರೈಕೆ ಮಾಡುತ್ತಿದೆ. ರೈತ ಸಂಪರ್ಕ ಕೇಂದ್ರ ಮೂಲಕ ರಾಜ್ಯ ಸರ್ಕಾರ ರಿಯಾಯತಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ವಿತರಿಸುತ್ತಿದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡಲಾಗುತ್ತಿದೆ. ಉತ್ತಮ ಮಳೆ ಸುರಿದಿದೆ. ರೈತರು ಉತ್ತಮ ಬೆಳೆ ಬೆಳೆಯಲು ಮುಂದಾಗಬೇಕು ಎಂದರು.
ಡಿಎಪಿ ಗೊಬ್ಬರದ ಅವಶ್ಯಕತೆ ಬಗ್ಗೆ ಮನವಿ ಮಾಡಿದ್ದು, ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಕರೆ ಮಾಡಿ ಕ್ಷೇತ್ರಕ್ಕೆ 1500 ಟನ್ ಡಿಎಪಿ ಗೊಬ್ಬರ ಪೂರೈಕೆ ಮಾಡಲು ಕೋರಲಾಗಿದೆ. ಸಚಿವರು ಒಂದು ಸಾವಿರ ಟನ್ ನೀಡುವ ಭರವಸೆ ನೀಡಿದರು. ರೈತ ವರ್ಗಕ್ಕೆ ಅಗತ್ಯವಾಗಿರುವ ಅನುಕೂಲಗಳನ್ನು ರಾಜ್ಯ ಸರ್ಕಾರ ಪೂರೈಸುತ್ತಿದೆ ಎಂದರು.
ಯಲಬುರ್ಗಾ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಮಾತನಾಡಿ, ಯಲಬುರ್ಗಾ, ಕುಕನೂರು ತಾಲೂಕಿನ ಒಟ್ಟು 3.16 ಲಕ್ಷ ಎಕರೆ ಸಾಗುವಳಿ ಭೂಮಿಯಲ್ಲಿ 2.19 ಲಕ್ಷ ಎಕರೆ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ. ಒಟ್ಟು 8 ಕಡೆ ಬಿತ್ತನೆ ಬೀಜ ಮಾರಾಟ ಕೇಂದ್ರ ತೆರೆಯಲಾಗಿದೆ. ಬೇಡಿಕೆಗೆ ತಕ್ಕಷ್ಟು ಬೀಜಗಳನ್ನು ರೈತರಿಗೆ ನೀಡಲು ತರಿಸಲಾಗಿದೆ ಎಂದರು.
ಕುಕನೂರು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಾದ ಬಸವರಾಜ ತೇರಿನ, ಸಿದ್ರಾಮರೆಡ್ಡಿ, ಸಿಬ್ಬಂದಿ ಶಿವಾನಂದ ಮಳಗಿ, ಗೂಳಪ್ಪ ಕೋಳಜಿ, ಪ್ರಮುಖರಾದ ಹನುಮಂತಗೌಡ ಚಂಡೂರು, ಸಿದ್ದಯ್ಯ ಕಳ್ಳಿಮಠ, ಸಂಗಮೇಶ ಗುತ್ತಿ, ಪಪಂ ಸದಸ್ಯರಾದ ಸಿರಾಜ ಕರಮುಡಿ, ರಾಮಣ್ಣ ಬಂಕದಮನಿ, ಮಹೇಶ ಗಾವರಾಳ, ನಿಂಗಪ್ಪ ಗೊರ್ಲೆಕೊಪ್ಪ ಇತರರಿದ್ದರು.