ಉಡುಪಿ: ಮೋಕ್ಷ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ನಿರ್ಮಿಸಿರುವ, ಕರಾವಳಿ ಭಾಗದ ಕಥಾಹಂದರ ಹೊಂದಿರುವ "ಕುದ್ರು" ಚಿತ್ರ ಅಕ್ಟೋಬರ್ 13 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ನಿರ್ದೆಶಕ ಭಾಸ್ಕರ್ ನಾಯ್ಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುದ್ರು ಎಂದರೆ ನೀರಿನಿಂದ ಸುತ್ತುವರೆದ ದ್ವೀಪ. ಈ ದ್ವೀಪದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮೂರು ಕಟುಂಬಗಳು ಸಹಬಾಳ್ವೆಯಿಂದ ಜೀವನ ನಡೆಸುತ್ತಿರುತ್ತಾರೆ. ಆ ಸಮಯದಲ್ಲಿ ವಾಟ್ಸಪ್ ಸಂದೇಶವೊಂದರಿಂದ ಎಲ್ಲರಲ್ಲೂ ಮನಸ್ತಾಪ ಬರುತ್ತದೆ. ಚಿತ್ರದ ಮೊದಲ ಭಾಗದ ಕಥೆ ಕಾಲೇಜಿನಲ್ಲಿ ನಡೆಯುತ್ತದೆ. ಆನಂತರ ಕುತೂಹಲ ಮೂಡಿಸುವ ಕಥಾಹಂದರವಿದೆ. ಉಡುಪಿ, ಮಲೆನಾಡು, ಗೋವಾ ಹಾಗೂ ಆಯಿಲ್ ರಿಗ್ ನಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದರು.
ಈ ಚಿತ್ರದಲ್ಲಿ ಮುಸ್ಲಿಂ ಸಮುದಾಯದ ಹುಡುಗಿಯಾಗಿ ನಟಿ ಡೈನ ಡಿಸೋಜ, ಹುಡುಗನಾಗಿ ನಟ ಫರ್ಹಾನ್, ಬ್ರಾಹ್ಮಣ ಹುಡುಗನಾಗಿ ನಾಯಕ ಹರ್ಷಿತ್ ಶೆಟ್ಟಿ, ಕ್ರಿಶ್ಚಿಯನ್ ಹುಡುಗನಾಗಿ ಗಾಡ್ವಿನ್ ಹಾಗೂ ಬ್ರಾಹ್ಮಣ ಹುಡುಗಿ ಪಾತ್ರದಲ್ಲಿ ನಾಯಕಿ ಪ್ರಿಯಾ ಹೆಗ್ಡೆ ಅಭಿನಯಿಸಿದ್ದಾರೆ. ಮಂಗಳೂರಿನ ನಮಿತಾ, ಪ್ರವಿಣ್ ಬಂಗೇರ, ಕಾಂತಾರ ಸತೀಶ್ ಆಚಾರ್ಯ ನಟಿಸಿದ್ದಾರೆ.
ಛಾಯಾಗ್ರಹಣ ಪುರಾಣಿಕ್, ಪ್ರದಿಪ್, ಸಂಗೀತ ನಿರ್ದೇಶನ ಪ್ರಜ್ವಲ್, ಪ್ರತಿಕ್ ಕುಂದು ಹಾಗೂ ಶ್ರೀನಿವಾಸ್ ಕಲಾಲ್ ಅವರ ಸಂಕಲನವಿರುವ "ಕುದ್ರು" ಚಿತ್ರಕ್ಕೆ ಉಡುಪಿ ಕೃಷ್ಣ ಆಚಾರ್ ಸಂಭಾಷಣೆ ಬರೆದಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಿಯಾ ಹೆಗ್ಡೆ, ಸತೀಶ್ ಆಚಾರ್ಯ, ಫರ್ಹಾನ್, ನಮಿತಾ, ಡಯಾನಾ ಡಿಸೋಜ, ಪ್ರವಿಣ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.