ಮೈಸೂರು: ವಿಶೇಷ ಸಾಧಕರಿಗೆ ಸನ್ಮಾನ ಮಾಡುವುದು ಸಮಾಜದ ಸಹಜ ಕರ್ತವ್ಯ. ಅದರಲ್ಲೂ ರುದ್ರಣ್ಣ ಹರ್ತಿಕೋಟೆ ಅವರಂತಹ ಸಮಾಜಮುಖಿ ಚೇತನಗಳನ್ನು ಸನ್ಮಾನಿಸುತ್ತಿರುವುದು ಸಂತಸದ ವಿಷಯ ಎಂದು ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್ ಮೆಚ್ಚುಗೆವ್ಯಕ್ತಪಡಿಸಿದರು.
ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ, ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ಹಾಗೂ ಕದಂಬ ರಂಗ ವೇದಿಕೆ ವತಿಯಿಂದ ವಿಜಯನಗರದ ಶ್ರೀ ಕಲಾನಿಕೇತನ ಆರ್ಟ್ ಗ್ಯಾಲರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಪ್ರತಿಕಾ ಮಂಡಳಿಯ ‘ರಾಷ್ಟ್ರೀಯ ಪ್ರತಿಕೋದ್ಯಮ ಉತ್ಕೃಷ್ಟತ’ ಪ್ರಶಸ್ತಿ ಪುರಸ್ಕೃತರಾದ ವಿಜಯವಾಣಿ’ ದಿನಪತ್ರಿಕೆಯ ಸಹಾಯಕ ಸಂಪಾದಕ ರುದ್ರಣ್ಣ ಹರ್ತಿಕೋಟೆ ಅವರನ್ನು ಅಭಿನಂದಿಸಿ ಮಾತನಾಡಿದರು.
ಇದೊಂದು ಅಪರೂಪದ ಸಮಾರಂಭ. ಅಭಿನಂದನೀಯವಾದ ಅಭಿನಂದನಾ ಸಮಾರಂಭ. ರುದ್ರಣ್ಣ ಹರ್ತಿಕೋಟೆ ಅವರಿಗೆ ಪ್ರತಿಷ್ಠಿತ ‘ರಾಷ್ಟ್ರೀಯ ಪತ್ರಿಕೋದ್ಯಮ ಉತ್ಕೃಷ್ಟತ’ ಪ್ರಶಸ್ತಿ ಸಂದಿರುವುದು ಖುಷಿಯ ವಿಚಾರ. ಹರ್ತಿಕೋಟೆ ಎಂದ ಕೂಡಲೇ ನನಗೆ ಪಿ.ಆರ್.ತಿಪ್ಪೇಸ್ವಾಮಿ ನೆನಪಾಗುತ್ತಾರೆ. ಅವರು ಶ್ರೇಷ್ಠ ಕಲಾವಿದರಾಗಿದ್ದರೂ ನನ್ನ ಆತ್ಮೀಯ ಮಿತ್ರರಾಗಿದ್ದರು. ಇಂದಿನ ಅಭಿನಂದಿತರಾದ ರುದ್ರಣ್ಣ ಕೂಡ ಹರ್ತಿಕೋಟೆಯವರು ಎನ್ನುವುದು ಬಹಳ ಮುಖ್ಯ ಸಂಗತಿಯಾಗಿದೆ ಎಂದರು.
ಪತ್ರಿಕೋದ್ಯಮಕ್ಕೂ ಕಲೆಗೂ ನಿಕಟವಾದ ಸಂಬಂಧ ಇದೆ. ಪತ್ರಿಕೋದ್ಯಮ, ಸಾಹಿತ್ಯ, ಕಲೆ ಒಟ್ಟಿಗೆ ಹೋಗುತ್ತವೆ. ಇವುಗಳಿಂದ ಸಮಾಜದ ಏಳಿಗೆ ಸಾಧ್ಯ. ಪತ್ರಿಕೋದ್ಯಮ ಕ್ಷೇತ್ರ ಅತ್ಯಂತ ಪವಿತ್ರ ಹಾಗೂ ಮಹತ್ವವಾದ ಕ್ಷೇತ್ರವಾಗಿದೆ. ಇದು ಪ್ರಜಾಪ್ರಭುತ್ವ ನಾಲ್ಕನೇ ಅಂಗ ಎಂದು ಪರಿಗಣಿಸುತ್ತೇವೆ. ಉಳಿದ ಮೂರಕ್ಕಿಂತಲೂ ಪತ್ರಿಕೋದ್ಯಮ ಕ್ಷೇತ್ರ ಬಹಳ ಪವಿತ್ರವಾಗಿದೆ. ಆದರೆ ಎಲ್ಲ ಕ್ಷೇತ್ರದಲ್ಲೂ ದುರುಪಯೋಗಪಡಿಸಿಕೊಳ್ಳುವವರು ಇರುತ್ತಾರೆ. ಆದರೆ, ರುದ್ರಣ್ಣ ಅವರು ಸದುಪಯೋಗಪಡಿಸಿಕೊಳ್ಳುವವರ ಸಾಲಿಗೆ ಸೇರುತ್ತಾರೆ ಎಂದರು.
ಅಭಿನಂದನೆ ಸ್ವೀಕರಿಸಿದ ರುದ್ರಣ್ಣ ಹರ್ತಿಕೋಟೆ ಮಾತನಾಡಿ, ನಮ್ಮ ತಾತ ಪಿ.ಆರ್.ತಿಪ್ಪೇಸ್ವಾಮಿ ಅವರ ಪ್ರೋತ್ಸಾಹದಿಂದ ಬರವಣಿಗೆ ಕ್ಷೇತ್ರ ಆಯ್ಕೆ ಮಾಡಿಕೊಂಡೆ. ಬಳಿಕ ಅನಿವಾರ್ಯವಾಗಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಬಂದೆ. ಮೊದಲು ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರಬೇಕೆಂಬ ಯಾವ ಆಸೆಯೂ ಇರಲಿಲ್ಲ. ಆದರೆ, ಈ ಕ್ಷೇತ್ರಕ್ಕೆ ಬಂದಿರುವುದಕ್ಕೆ ತೃಪ್ತಿಯ ಭಾವನೆ ಇದೆ ಎಂದರು.
ನಾನು ರಾಷ್ಟ್ರೀಯ ಪ್ರಶಸ್ತಿ ಪಡೆಯಲು ನನ್ನ ತಾತನೇ ಕಾರಣ.ಈ ಪ್ರಶಸ್ತಿಯನ್ನು ಅವರಿಗೆ ಅರ್ಪಿಸುತ್ತೇನೆ. ಅವರ ಪ್ರೋತ್ಸಾಹ ಇಲ್ಲದೆ ಇದ್ದರೆ ಈ ಮಟ್ಟಕ್ಕೆ ಬೆಳೆಯಲು ಆಗುತ್ತಿರಲಿಲ್ಲ ಎಂದರು.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ನನಗೆ ಮೊದಲು ಅವಕಾಶ ಕೊಟ್ಟಿದ್ದು ಶ್ಯಾಮರಾಯರು. ಅದೇ ರೀತಿ ನಾನು ಇಂದು ಕೆಲಸ ಮಾಡುತ್ತಿರುವ ಸಂಸ್ಥೆಯ ವಿಜಯ ಸಂಕೇಶ್ವರ ಹಾಗೂ ಆನಂದ ಸಂಕೇಶ್ವರ ಅವರನ್ನು ನೆನಪು ಮಾಡಿಕೊಳ್ಳಬೇಕು. ಅವರು ನೀಡುತ್ತಿರುವ ಪ್ರೋತ್ಸಾಹವನ್ನು ಸ್ಮರಿಸಬೇಕು ಎಂದರು.
ನಾನು ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದೇನೆ. ಇದರಿಂದ ಜನರಿಗೆ ಹೆಚ್ಚಿನ ಮಾಹಿತಿ ನೀಡಬಹುದಾಗಿದೆ. ಜನ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡಬಹುದಾಗಿದೆ ಎಂದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ,‘ರಾಷ್ಟ್ರೀಯ ಪ್ರತಿಕೋದ್ಯಮ ಉತ್ಕೃಷ್ಟತ’ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ರುದ್ರಣ್ಣ ಆಗಿದ್ದಾರೆ. ಬೆಂಗಳೂರಿನಲ್ಲಿ ರಾಜಕೀಯ ವರದಿಗಾರಿಕೆ ಮಾಡುತ್ತಿರುವ ಅವರು, ಅಪಾರ ಜನಮುಖಿ ವರದಿಗಳನ್ನು ಬರೆದಿದ್ದಾರೆ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಮಾತನಾಡಿದರು. ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ, ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್‌ನ ಪ್ರಾಚಾರ್ಯ ಕೆ.ಸಿ.ಮಹದೇವಶೆಟ್ಟಿ, ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನದ ಕೋಶಾಧ್ಯಕ್ಷ ಪ್ರೊ.ಎಚ್.ಎಂ.ಪರಮೇಶ್ವರಯ್ಯ ಇತರರರಿದ್ದರು.