ಶಿವಮೊಗ್ಗ: ರಾಜ್ಯಪಾಲರು ನೀಡಿರುವ ಸಿದ್ದರಾಮಯ್ಯ ಮೇಲಿನ ಪ್ರಾಸಿಕ್ಯೂಷನ್‌ಗೆ ನ್ಯಾಯಾಲಯ ಅನುಮತಿ ಕೊಟ್ಟರೆ ಕಾಂಗ್ರೆಸ್‌ನಲ್ಲಿ ಮುಂದೆ ಮುಖ್ಯಮಂತ್ರಿ ಖುರ್ಚಿಗಾಗಿ ಯಕ್ಷಗಾನ ನಡೆಯಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
ಈಗಾಗಲೇ ಸಚಿವರಾದ ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಆರ್.ವಿ.ದೇಶಪಾಂಡೆ ಸೇರಿದಂತೆ ಹಲವರು ಸಿಎಂ ರೇಸ್‌ನಲ್ಲಿದ್ದಾರೆ. ಇದೀಗ ಬಸವರಾಜ ರಾಯರೆಡ್ಡಿ ಕೂಡ ಸೇರ್ಪಡೆಗೊಂಡಿದ್ದಾರೆ. ಮೇಲ್ನೋಟಕ್ಕೆ ಇವರಲ್ಲರೂ ಸಿಎಂಗೆ ಬೆಂಬಲ ನೀಡುವುದಾಗಿ ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ಸಿಎಂ ಖುರ್ಚಿ ಮೇಲೆ ಅವರೆಲ್ಲರಿಗೂ ಹಂಬಲ ಹೆಚ್ಚಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಿದ್ದರಾಮಯ್ಯ ಬಿಟ್ಟು 135 ಶಾಸಕರಲ್ಲಿ ಯಾರಾದರೂ ನಮ್ಮ ಅಭ್ಯಂತರವಿಲ್ಲ. ಆದರೆ ಮೇಲ್ನೋಟಕ್ಕೆ ಸಿಎಂ ಪರ ಎಂದು ಕೆಲವರು ನಾಟಕವಾಡುತ್ತಿದ್ದಾರೆ. ಮುಡಾ ಹಗರಣದಲ್ಲಿ ಇಷ್ಟೊಂದು ಆಪಾದನೆಗಳು ಕೇಳಿಬಂದಿದ್ದು ಸಿದ್ದರಾಮಯ್ಯ ಒಂದು ಕ್ಷಣವೂ ಸಿಎಂ ಸ್ಥಾನದಲ್ಲಿ ಮುಂದುವರಿಯುವುದು ಯೋಗ್ಯವಲ್ಲ. ಸಂವಿಧಾನಬದ್ಧವಾಗಿ ಪ್ರಮಾಣವಚನ ಸ್ವೀಕರಿಸಿ ಇದೀಗ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.