ಹುಬ್ಬಳ್ಳಿ: ವಾಕರಸಾ ಸಂಸ್ಥೆ ವ್ಯಾಪ್ತಿಯ ನಾಲ್ಕು ಘಟಕದ ವ್ಯವಸ್ಥಾಪಕರಿಗೆ ಇಲ್ಲಿಯ ಕೇಂದ್ರ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ. ಅವರು ಶನಿವಾರ ಪ್ರಶಂಸನಾ ಪತ್ರ ವಿತರಿಸಿದರು.
ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಹೆಚ್ಚು ಜನ ಸಂಚಾರ ಇರುವುದರಿಂದ ಅತಿ ಹೆಚ್ಚು ಸಾರಿಗೆ ಆದಾಯ ಕ್ರೋಡೀಕರಿಸಲು ಹಾಗೂ ಚಾಲನಾ ಸಿಬ್ಬಂದಿ ಗೈರು ಹಾಜರಾಗದಂತೆ ಪ್ರೋತ್ಸಾಹಿಸಲು ಈ ನಿರ್ಧಾರ ಕೈಗೊಳ್ಳಲಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಸಂಸ್ಥೆಯ 9 ವಿಭಾಗಗಳಲ್ಲಿ ಹು-ಧಾ ನಗರ ಸಾರಿಗೆ ವಿಭಾಗವು ಉಳಿದ ವಿಭಾಗಗಳಿಗಿಂತ ನಿಗದಿಪಡಿಸಿದ ಗುರಿ ಸಾಧನೆ ಮಾಡಿದೆ ಎಂದು ಪ್ರಿಯಾಂಗ ಎಂ. ತಿಳಿಸಿದರು.
ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ಸಿದ್ದಲಿಂಗೇಶ, ವಿಭಾಗೀಯ ಸಂಚಾರ ಅಧಿಕಾರಿಗಳಾದ ಕೆ.ಎಲ್. ಗುಡೆಣ್ಣವರ, ವಿಭಾಗೀಯ ಯಾಂತ್ರಿಕ ಅಭಿಯಂತರ ಪ್ರವೀಣ ಈಡೂರ, ಮುಖ್ಯ ಸಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ, ಉಪ ಮುಖ್ಯ ಸಂಚಾರ ವ್ಯವಸ್ಥಾಪಕ ಜಿ. ವಿಜಯಕುಮಾರ, ಅಧಿಕಾರಿಗಳಾದ ರವಿ ಅಂಚಗಾವಿ, ಎಸ್.ಎಲ್. ನಾಗಾವಿ ಉಪಸ್ಥಿತರಿದ್ದರು.