ಮೈಸೂರು: ನಿರೂಪಣೆ ಮೂಲಕ ಜನಮಾನಸದಲ್ಲಿ ನೆಲೆ ನಿಂತ ನಿರೂಪಕಿ ಹಾಗೂ ನಟಿ ಅಪರ್ಣಾ ಅವರ ನಿಧನಕ್ಕೆ ಜೈಭೀಮ್ ಜನಸ್ಪಂದನ ವೇದಿಕೆ ವತಿಯಿಂದ ಸೋಮವಾರ ಲಕ್ಷ್ಮೀಪುರಂ ಬಡಾವಣೆಯಲ್ಲಿ ನುಡಿನಮನ ಸಲ್ಲಿಸಲಾಯಿತು.
ನಿರೂಪಕ ಅಜಯ್ ಶಾಸ್ತ್ರಿ ಮಾತನಾಡಿ, ಮನೆಯೇ ಮೊದಲ ಪಾಠಶಾಲೆ ಎಂಬುದಕ್ಕೆ ನಿದರ್ಶನವಾಗಿ ಅಪರ್ಣಾ ಅವರಿಗೆ ಕನ್ನಡ ಭಾಷಾ ಸಾಹಿತ್ಯದ ಅಭಿರುಚಿ ಬರಲು ಕಾರಣ ಅವರ ತಂದೆ. ಕೆ.ಎಸ್. ನಾರಾಯಣಸ್ವಾಮಿ ಅವರು, ತಂದೆಯ ಆಪ್ತರಾದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂವು ಚಿತ್ರದ ಗಂಭೀರ ಪಾತ್ರಗಳ ನಟನೆಯ ಮೂಲಕ ಮುಖ್ಯವಾಹಿನಿಯಲ್ಲಿ ಅಪರ್ಣಾ ಗುರುತಿಸಿಕೊಂಡರು. ಆಕಾಶವಾಣಿ ದೂರದರ್ಶನದಲ್ಲಿ ಸುದ್ದಿ ವಾಚಕರಾಗಿ, ದೀಪಾವಳಿ ಸೇರಿದಂತೆ ವಿವಿಧ ಕಾರ್ಯಕ್ರಮದ ನಿರರ್ಗಳ ನಿರೂಪಣೆ, ಮೈಸೂರು ದಸರಾ, ಹಂಪಿ ಉತ್ಸವ, ಕರಾವಳಿ ಹಬ್ಬ ಸೇರಿದಂತೆ ಹಲವು ಕಾರ್ಯಕ್ರಮಗಳ ನಿರೂಪಕಿಯಾಗಿ ಅಪರ್ಣಾ ಜನಪ್ರಿಯತೆ ಪಡೆದಿದ್ದರು ಎಂದರು.