ಜಿಲ್ಲೆ

ದಲಿತೋದ್ದಾರವೇ ಕುದ್ಮುಲ್​ ರಂಗರಾಯರ ಜೀವನ ಗುರಿ

ಪವನ್ ಆಚಾರ್ಯ ನೀರ್ಚಾಲು

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕುದ್ಮುಲ್​ ರಂಗರಾಯರಿಗೆ ದಲಿತೋದ್ದಾರವೇ ಜೀವನದ ಗುರಿಯಾಗಿತ್ತು. ಅಸ್ಪೃಶ್ಯತೆ ನಿವಾರಣೆಗಾಗಿ ಅವರು ಜೀವನವಿಡೀ ಹೋರಾಟ ನಡೆಸಿದರು.  ಗಾಂಧೀಜಿ, ಅಂಬೇಡ್ಕರ್​ ಮತ್ತು ಸಾವರ್ಕರ್​ಗಿಂತಲೂ ಮೊದಲು ರಂಗರಾಯರು ಸಾಮಾಜಿಕ ಬದಲಾವಣೆಯ ಹೋರಾಟವನ್ನು ಪ್ರಾರಂಭಿಸಿದ್ದರು ಎಂದು ಸಾಮಾಜಿಕ ಕಾರ್ಯಕರ್ತ ವಾದಿರಾಜ್​ ತಿಳಿಸಿದರು.

ನಗರದ ದಿ ಮಿಥಿಕ್​ ಸೊಸೈಟಿ ವತಿಯಿಂದ ಭಾನುವಾರ ಆಯೋಜಿಸಿದ್ದ ದಲಿತ ಗುರು ದಿ.ತಲಕಾಡು ರಂಗೇಗೌಡ ಸ್ಮಾರಕ ದತ್ತಿ ಉಪನ್ಯಾಸದಲ್ಲಿ "ಸಾಮಾಜಿಕ ಪರಿವರ್ತನೆ: ಕುದ್ಮುಲ್​ ರಂಗರಾಯರ ದಿಟ್ಟ ಹೆಜ್ಜೆಗಳು' ಕುರಿತು ಮಾತನಾಡಿದರು.

ಸ್ವತ: ಮಹಾತ್ಮ ಗಾಂಧಿ ಅವರೇ ಕುದ್ಮುಲ್​ ರಂಗರಾಯರನ್ನು ತಮ್ಮ "ಮಾನಸಿಕ ಗುರು' ಎಂದು ವರ್ಣಿಸಿದ್ದಾರೆ. ಕರ್ನಾಟಕದ ವಿಶಾಲವಾದ ಕರಾವಳಿ ಪ್ರದೇಶದಲ್ಲಿ ರಂಗರಾಯರು ಕೈಗೊಂಡ ಸಾಮಾಜಿಕ ಪರಿವರ್ತನೆ ಕಾರ್ಯಗಳು ಗಮನಾರ್ಹವಾಗಿವೆ. 1888ರಲ್ಲಿಯೇ ಮಂಗಳೂರಿನ ಚಿಲಿಂಬಿಯಲ್ಲಿ ಅವರು ದಲಿತರಿಗಾಗಿ ಶಾಲೆಯನ್ನು ಪ್ರಾರಂಭಿಸಿದರು. ನಂತರ ವಿವಿಧ ಪ್ರದೇಶಗಳಲ್ಲಿ 20 ಶಾಲೆಗಳನ್ನು ಪ್ರಾರಂಭಿಸಿದ್ದರು ಎಂದು ತಿಳಿಸಿದರು.

ಈ ಶಾಲೆಗಳಲ್ಲಿ ಪಠ್ಯವಿಷಯಗಳ ಜತೆಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಕೌಶಲವನ್ನು ಬೆಳೆಸಿಕೊಳ್ಳುವ ಉದ್ದೇಶದಿಂದ ಮರಗೆಲಸ, ತೋಟಗಾರಿಗೆ, ನೇಕಾರಿಕೆ, ಕಮ್ಮಾರಿಕೆ, ರೇಷ್ಮೆಹುಳು ಸಾಕಾಣಿ ಮುಂತಾದ ವಿಷಯಗಳ ಕುರಿತು ತರಬೇತಿಯನ್ನು ನೀಡಲಾಗುತ್ತಿತ್ತು. ಈ ಕಾರಣದಿಂದ ಈ ಎಲ್ಲ ಶಾಲೆಗಳು ಉದ್ಯೋಗಾಧಾರಿತ ಶಾಲೆಗಳಾಗಿ ಪ್ರಸಿದ್ಧಿಯನ್ನು ಪಡೆದವು ಎಂದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ್ತ ಕುಲಪತಿ ಪ್ರೊ.ಜೋಗನ್​ ಶಂಕರ್​ ಮಾತನಾಡಿ, ಆಧುನಿಕ ಕಾಲದಲ್ಲಿ ನಡೆದ ಸಾಮಾಜಿಕ ಚಳುವಳಿಗಳ ಬಗ್ಗೆ ವಿವರವಾದ ಅಧ್ಯಯನ ಅವಶ್ಯಕವಿದ್ದು, ಇದರಿಂದಾದ ಸಾಮಾಜಿಕ ಬದಲಾವಣೆ ಕುರಿತು ಮತ್ತಷ್ಟು ಚಿಂತನೆ ಮಾಡಬೇಕಿದೆ. ಕುದ್ಮುಲ್​ ರಂಗರಾಯರು ಸಾಮಾಜಿಕ ಸುಧಾರಣೆಯಲ್ಲಿ ಒಂದು "ಸಾಮಾಜಿಕ ಸೇತುವೆಯಾಗಿ' ಕಾರ್ಯನಿರ್ವಹಿಸಿದ ಮಹನೀಯರು. ಸಮಾಜದ ಪರಿವರ್ತನೆಗೆ ಕಾರಣೀಭೂತರಾದ ಇಂತಹ ಮಹನೀಯರನ್ನು ಸದಾಕಾಲ ಸ್ಮರಿಸಿಕೊಳ್ಳುವುದು ಅಗತ್ಯ ಎಂದರು. ದಿ ಮಿಥಿಕ್​ ಸೊಸೈಟಿಯ ಅಧ್ಯಕ್ಷ ವಿ.ನಾಗರಾಜ್​, ಆಡಳಿತ ಮಂಡಳಿಯ ಸದಸ್ಯ ಎಂ.ಆರ್​.ಪ್ರಸನ್ನ ಕುಮಾರ್​, ಚಿತ್ರದುರ್ಗ ಹಾಲಿ ಸಂಸದ ಗೋವಿಂದ ಕಾರಜೋಳ, ಕರ್ನಾಟಕ ವಿಧಾನ ಪರಿಷತ್​ನ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.

1897ರಲ್ಲಿ ಡಿಪ್ರೆಸ್ಸೆಡ್​ ಕ್ಲಾಸ್​ ಮಿಷನ್​ ಸಂಸ್ಥೆಯನ್ನು ಹುಟ್ಟುಹಾಕುವ ಮೂಲಕ ಕುದ್ಮಲ್​ ರಂಗರಾವ್​ ತಮ್ಮ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಆ ಕಾಲದಲ್ಲಿಯೇ ಬಿಸಿಯೂಟದ ವ್ಯವಸ್ಥೆ, ಉಚಿತ ಹಾಸ್ಟೆಲ್​ ಮತ್ತು ಮಕ್ಕಳನ್ನು ನಿಯಮಿತವಾಗಿ ಶಾಲೆಗೆ ಕಳಿಸುತ್ತಿದ್ದ ಪಾಲಕರಿಗೆ ಪ್ರೋತ್ಸಾಹಧನ ಇತ್ಯಾದಿ ಯೋಜನೆಯನ್ನು ರೂಪಿಸಿದ್ದರು. "ದೀನೋದ್ಧಾರವೇ ದೇಶೋದ್ಧಾರ' ಎಂದು ನಂಬಿದ್ದ ಕುದ್ಮುಲ್​ ರಂಗರಾಯರು 20ನೇ ಶತಮಾನದಲ್ಲಿ ಎಲ್ಲ ಸಾಮಾಜಿಕ ಸುಧಾಕರಿಗೂ ಆದ್ಯ ಪ್ರವರ್ತಕರಾಗಿದ್ದಾರೆ. > ವಾದಿರಾಜ್​, ಸಾಮಾಜಿಕ ಕಾರ್ಯಕರ್ತ