ಜಿಲ್ಲೆ

ವಿಧಾನಸೌಧ ಮುತ್ತಿಗೆ 12ರಂದು

ಕೂಡ್ಲಿಗಿ: ಬೆಳೆಗೆ ಕಾನೂನಾತ್ಮಕ ಬೆಲೆ ನಿಗದಿ ಪಡಿಸುವುದು ಸೇರಿ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆ. 12ರಂದು ವಿಧಾನಸೌಧ ಮುತ್ತಿಗೆ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ವಾಸುದೇವ ಮೇಟಿ ಬಣ) ಜಿಲ್ಲಾಧ್ಯಕ್ಷ ಎಂ.ಪ್ರಕಾಶ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತಾನಾಡಿದರು. ಮಾಡಿದ ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಅತಿವೃಷ್ಟಿಯಿಂದ ರೈತರ ಬದುಕು ಮೂರಾಬಟ್ಟೆಯಾಗಿದೆ. ಬೆಳೆಗೆ ಸರ್ಕಾರ ಸೂಕ್ತ ಬೆಂಬಲ ಬೆಲೆ ನೀಡುತ್ತಿಲ್ಲ. ಕನಿಷ್ಟ ಬೆಂಬಲ ಬೆಲೆ ಘೋಷಿಸಿದರೂ ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆದಿಲ್ಲ. ಬೆಳೆ, ಮನೆ, ಜಾನುವಾರು ನಷ್ಟಕ್ಕೆ ಪರಿಹಾರ ಧನ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆದರೂ ರಾಜ್ಯ ಸರ್ಕಾರ ವಾಪಸು ಪಡೆದಿಲ್ಲ ಎಂದು ಆರೋಪಿಸಿದರು.

ತರಕಾರಿ ಬೆಳೆಗೆ ಕೇರಳ ಮಾದರಿಯಲ್ಲಿ ಬೆಲೆ ನಿಗದಿಪಡಿಸಬೇಕು. ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಬೇಕು. ತುಂಗಭದ್ರಾ ಡ್ಯಾಂಗೆ ಸಮಾನಾಂತರ ಜಲಾಶಯಕ್ಕೆ ಡಿಪಿಆರ್‌ಗಾಗಿ ಕಳೆದ ಅಧಿವೇಶನದಲ್ಲಿ ಘೋಷಿಸಿದ ಸಾವಿರ ಕೋಟಿ ರೂ. ಬಿಡುಗಡೆ ಮಾಡಿ, ಜಲಾಶಯ ನಿರ್ಮಾಣಕ್ಕೆ ಮುಂದಾಗಬೇಕು ಎಂಬುದೂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು. ಸಂಘಟನೆಯ ರಾಜ್ಯ ಉಪಾಧ್ಯಕ್ಷ ದೇವರಮನೆ ಮಹೇಶ್, ತಾಲೂಕು ಅಧ್ಯಕ್ಷ ಬಿ.ಜಿ.ಕೊಟ್ರೇಶ್, ಕೆ.ಪರಶುರಾಮ, ಬಸಪ್ಪ,ಜೆ.ಈಶ್ವರಪ್ಪ ಇತರರು ಇದ್ದರು.