ಕೂಡ್ಲಿಗಿಯಲ್ಲಿ ಬಿಇಒ ಪದ್ಮನಾಭ ಕರಣಂಗೆ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು. ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಸಿದ್ಧಾರಾಧ್ಯ, ಕೊಟ್ಟೂರು ತಾಲೂಕು ಅಧ್ಯಕ್ಷ ಕೆ.ಸಿದ್ದಪ್ಪ, ಖಜಾಂಚಿ ವೆಂಕಟೇಶ್ವರ, ಪ್ರ.ಕಾರ್ಯದರ್ಶಿ ಕೆ.ಎಚ್.ಎಂ.ಶಶಿಧರ, ಸರ್ಕಾರಿ ನೌಕರರ ಸಂಘದ ಖಜಾಂಚಿ ಮುತ್ತುರಾಜ, ಕೆ.ಪಿ.ಎಂ.ಶಿವಾನಂದ ಸ್ವಾಮಿ ಇತರರಿದ್ದರು. 
ಜಿಲ್ಲೆ

ಶಿಕ್ಷಕರ ಮೇಲಿನ ಒತ್ತಡ ಕಡಿಮೆ ಮಾಡಿ

ಕೂಡ್ಲಿಗಿ: ಏಕರೂಪದ ಕಾರ್ಯಕ್ರಮಗಳ ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ಬಿಇಒ ಪದ್ಮನಾಭ ಕರಣಂಗೆ ಸೋಮವಾರ ಮನವಿ ಸಲ್ಲಿಸಿದರು.

ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಸಿದ್ಧಾರಾಧ್ಯ ಮಾತನಾಡಿ, ಶಿಕ್ಷಕರು ಇಲಾಖೆಯ ಜತೆಗೂಡಿ ಮಕ್ಕಳ ಗುಣಾತ್ಮಕ ಕಲಿಕೆಗಾಗಿ ವಿವಿಧ ರೀತಿಯ ಚಟುವಟಿಕೆಗಳನ್ನು ಕೈಗೊಂಡು ಫಲಿತಾಂಶ ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ರಾಜ್ಯ ಮತ್ತು ಜಿಲ್ಲಾ ಹಂತದ ಅಧಿಕಾರಿಗಳು ಪ್ರತ್ಯೇಕವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇದರಿಂದ ಒತ್ತಡದ ಜತೆಗೆ ಗೊಂದಲ ಉಂಟಾಗಿದೆ. ಹೀಗಾಗಿ ಏಕರೂಪದ ಕಾರ್ಯಕ್ರಮಗಳನ್ನು ರೂಪಿಸಿ ಶಿಕ್ಷಕರ ಮೇಲಿನ ಒತ್ತಡ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ಪದ್ಧತಿಯಲ್ಲಿ ಮೂರು ಹಂತದ ಪರೀಕ್ಷೆಗಳ ಬದಲು ಈ ಹಿಂದಿನಂತೆ 2 ಪರೀಕ್ಷೆಗಳನ್ನು ನಡೆಸಬೇಕು. ಸಿಬಿಎಸ್‌ಇ ಮತ್ತು ಐಸಿಎಸ್ ಪರೀಕ್ಷಾ ಫಲಿತಾಂಶ ಮಾದರಿಯಂತೆ ಆಂತರಿಕ ಅಂಕಗಳನ್ನು ಪರಿಗಣಿಸಿ ಫಲಿತಾಂಶ ನೀಡಬೇಕು. ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ವಿನ್ಯಾಸವನ್ನು ಸರಳೀಕರಣಗೊಳಿಸುವುದು ಹಾಗೂ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯವನ್ನು ಏಪ್ರಿಲ್ 14ರೊಳಗೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಕೊಟ್ಟೂರು ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎಚ್.ಎಂ.ಶಶಿಧರ, ಸರ್ಕಾರಿ ನೌಕರರ ಸಂಘದ ಖಜಾಂಚಿ ಮುತ್ತುರಾಜ, ಹಿರಿಯ ಉಪಾಧ್ಯಕ್ಷ ಕೆ.ಪಿ.ಎಂ.ಶಿವಾನಂದ ಸ್ವಾಮಿ, ಖಜಾಂಚಿ ವೆಂಕಟೇಶ್ವರ, ಪ್ರಮುಖರಾದ ದೇವರಾಜ, ಸೋಮಶೇಖರ, ಮಹಾಂತೇಶ್, ರಮೇಶ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ತಾಲೂಕು ಕಾರ್ಯದರ್ಶಿ ಲೋಕಪ್ಪ, ಕೆ.ಶಶಿಕಲಾ ಇತರರಿದ್ದರು.