ಕೂಡ್ಲಿಗಿ: ವಾರ್ಷಿಕ ಬಜೆಟ್‌ನಲ್ಲಿ ಸಾರ್ವಜನಿಕರಿಗೆ ಮೂಲ ಸೌಕರ್ಯ ಒದಗಿಸಲು ಸರ್ವ ಸದಸ್ಯರು ಸಹಕಾರ ನೀಡಬೇಕು ಎಂದು ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ ಹೇಳಿದರು.
ಪಪಂ ಸಭಾಂಗಣದಲ್ಲಿ ಶನಿವಾರ ಪ್ರಸಕ್ತ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರ ಮಂಜೂರು ಮಾಡುವ ಬಜೆಟ್‌ನಲ್ಲಿ ಪಟ್ಟಣದ ಎಲ್ಲ 20 ವಾರ್ಡ್‌ಗಳಲ್ಲಿ ಅಗತ್ಯ ಸೌಕರ್ಯ ಒದಗಿಸಬೇಕಿದೆ. ರಸ್ತೆ, ಚರಂಡಿ, ಶುದ್ಧ ಕುಡಿವ ನೀರು, ಶೌಚಗೃಹ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈಗಾಗಲೇ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಸಹ ಸುಂದರ ಹಾಗೂ ಸ್ವಚ್ಛ ಪಟ್ಟಣಕ್ಕೆ ಅಗತ್ಯ ಅನುದಾನ ನೀಡಲು ಉತ್ಸುಕರಾಗಿದ್ದು, ಸಾರ್ವಜನಿಕರು ಮೆಚ್ಚುವ ರೀತಿ ಕೆಲಸ ಮಾಡಬೇಕು. ಇದಕ್ಕೆ ಎಲ್ಲ ಸದಸ್ಯರು ಸಹಕಾರ ನೀಡಬೇಕು ಎಂದರು.
ಪಪಂ ಲೆಕ್ಕಾಧಿಕಾರಿ ಎಚ್.ವಿ. ಗುರುಮೂರ್ತಿ ಮಾತನಾಡಿ, ಪ್ರಸಕ್ತ ವರ್ಷ ಎಸ್‌ಎಫ್‌ಸಿ ವೇತನ ಅನುದಾನ 2.94 ಕೋಟಿ ರೂ, ಬೀದಿದೀಪ ವಿದ್ಯುತ್ ಅನುದಾನ 1.98 ಕೋಟಿ ರೂ., ನೀರು ಸರಬರಾಜು ಸ್ಥಾವರಗಳ ವಿದ್ಯುತ್ ಅನುದಾನ 2.89 ಕೋಟಿ ರೂ., ಮುಕ್ತ ನಿಧಿ ಅನುದಾನ 91 ಲಕ್ಷ ರೂ., ಎಸ್ಸಿಪಿ ಅನುದಾನ 24 ಲಕ್ಷ ರೂ., ಟಿಎಸ್ಪಿ 12 ಲಕ್ಷ ರೂ., ಕುಡಿವ ನೀರು ಅನುದಾನ 2.50 ಲಕ್ಷ ರೂ. ಹಾಗೂ 15ನೇ ಹಣಕಾಸು 2.75 ಕೋಟಿ ರೂ. ಅಂದಾಜು ಅನುದಾನ ಹಂಚಿಕೆಯಾಗಬಹುದು ಎಂದು ತಿಳಿಸಿದರು.
ವಾರ್ಡ್‌ಗಳ ಸಮಸ್ಯೆಗಳ ಕುರಿತು ಸದಸ್ಯರು ಸಭೆಯ ಗಮನ ಸೆಳೆದರು. ಮುಂದಿನ ದಿನಗಳಲ್ಲಿ ಅಗತ್ಯ ಅನುದಾನ ಒದಗಿಸಿ ಬಗೆಹರಿಸುವುದಾಗಿ ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ ಹಾಗೂ ಮುಖ್ಯಾಧಿಕಾರಿ ಎಂ.ಕೆ.ಮುಗಳಿ ಭರವಸೆ ನೀಡಿದರು. ಪಪಂ ಉಪಾಧ್ಯಕ್ಷೆ ಲೀಲಾವತಿ ಪ್ರಭಾಕರ ಇತರರಿದ್ದರು.