ಕೂಡ್ಲಿಗಿ: ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಕಾವಲು ಸಮಿತಿ ರಚಿಸಬೇಕು ಎಂದು ಸ್ನೇಹ ಸಂಸ್ಥೆಯ ನಿರ್ದೇಶಕ ಟಿ.ರಾಮಾಂಜನೇಯ ಹೇಳಿದರು.
ತಾಲೂಕಿನ ಕಕ್ಕುಪ್ಪಿ ಗ್ರಾಪಂ ಕಚೇರಿಯಲ್ಲಿ ಏರ್ಪಡಿಸಿದ್ದ ಕಾವಲು ಸಮಿತಿಯ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಹಾಗೂ ಮಹಿಳೆ ಮತ್ತು ಮಕ್ಕಳ ಮೇಲಾಗುವ ದೌರ್ಜನ್ಯ ತಡೆ ಕುರಿತು ಚರ್ಚಿಸಬೇಕು. ಅಲ್ಲದೆ ಪ್ರತಿ ವಾರ್ಡ್ ಸಭೆ ಕೈಗೊಂಡು ಜಾಗೃತಿ ಮೂಡಿಸಬೇಕು. ಮುಚ್ಚಳಿಕೆ ಪತ್ರ ಬರೆಸಿಕೊಳ್ಳಬೇಕು. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಕಂಡುಬಂದರೆ ತಕ್ಷಣ ಸಮಿತಿ ಸದಸ್ಯರು ತಡೆಗಟ್ಟಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಟಿ.ಅನ್ನಪೂರ್ಣ ಮಾತನಾಡಿ, ಬಾಲ್ಯ ವಿವಾಹ ಮಾಡಬಾರದು. ಮಕ್ಕಳನ್ನು ತಪ್ಪದೆ ಶಾಲೆಗೆ ಕಳಿಸಬೇಕು.ಬಾಲ್ಯ ವಿವಾಹ ಕಾಯ್ದೆ ಉಲ್ಲಂಘಿಸಿದಲ್ಲಿ ಪಾಲಕರಿಗೆ ಒಂದು ಲಕ್ಷ ರೂ. ದಂಡ, ಎರಡು ವರ್ಷ ಜೈಲು ಶಿಕ್ಷೆ ಇರುತ್ತದೆ ಎಂದರು.
ಗ್ರಾಪಂ ಪಿಡಿಒ ಶರಣಪ್ಪ ಮಾತನಾಡಿದರು. ಅಧ್ಯಕ್ಷೆ ಆರ್.ಜಿ.ಲಕ್ಷ್ಮೀದೇವಿ, ಸದಸ್ಯರಾದ ಬಿ.ಸಿದ್ದಮ್ಮ, ಮಾರಕ್ಕ, ಮುಖ್ಯಶಿಕ್ಷಕರಾದ ಸೋಮಶೇಖರ, ಕೊಟ್ರೇಶ್, ಎಲ್.ಸೋಮಿ ನಾಯ್ಕ, ಗ್ರಾಮಲೆಕ್ಕಿಗ ಯು.ನವೀನ್ ಕುಮಾರ, ಸ್ನೇಹ ಸಂಸ್ಥೆಯ ಸಿಬ್ಬಂದಿ ಮಹಾದೇವಿ, ಶೈಲಜಾ, ಎಚ್.ಗೀತಾ, ಆರೋಗ್ಯ ಇಲಾಖೆಯ ನೇತ್ರಾವತಿ, ತಿಪ್ಪಕ್ಕ, ಅಂಗನವಾಡಿ-ಆಶಾ ಕಾರ್ಯಕರ್ತೆಯರು ಇದ್ದರು.