ಕೂಡ್ಲಿಗಿಯ ಶ್ರೀ ತರಳಬಾಳು ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ತರಳಬಾಳು ಬೃಹನ್ಮಠದ ಲಿಂ.ಶಿವಕುಮಾರ ಶಿವಾಚಾರ್ಯರ ಶ್ರದ್ಧಾಂಜಲಿ ಹಾಗೂ ಪ್ರಾದೇಶಿಕ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು. 
ಜಿಲ್ಲೆ

ತರಳಬಾಳು ಶಿವಕುಮಾರ ಶ್ರೀಗಳ ಕೊಡುಗೆ ಅಪಾರ

ಕೂಡ್ಲಿಗಿ: ತರಳಬಾಳು ಬೃಹನ್ಮಠದ ಲಿಂ.ಶಿವಕುಮಾರ ಶಿವಾಚಾರ್ಯ ಅವರ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕೊಡುಗೆ ಅಪಾರವಾಗಿದೆ ಎಂದು ವಿಜಯನಗರ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಬಿ.ಶಿವಾನಂದ ಹೇಳಿದರು.

ಪಟ್ಟಣದ ಶ್ರೀ ತರಳಬಾಳು ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತರಳಬಾಳು ಬೃಹನ್ಮಠದ ಲಿಂ.ಶ್ರೀ ಶಿವಕುಮಾರ ಶಿವಾಚಾರ್ಯರ ಶ್ರದ್ಧಾಂಜಲಿ ಹಾಗೂ ಪ್ರಾದೇಶಿಕ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀಗಳು ಮರುಳಸಿದ್ಧರು-ಬಸವಣ್ಣನವರ ಅಭಿನವ ಅವತಾರ ಎಂಬಂತೆ ಬಾಳಿ-ಬೆಳಗಿದರು. ಅವರ ನಡೆ-ನುಡಿಯಲ್ಲಿ ಏಕತೆ ಕಾಯ್ದುಕೊಂಡವರು, ನುಡಿ ಜಾಣರಾಗಿಯೂ-ನಡೆ ಧೀರರಾಗಿಯೂ ಬಾಳಿ, ವಿಶ್ವಬಂಧುವಾದವರು. ಅವರ ಚಿಂತನೆಗಳು ನಮಗೆ ಜ್ಯೋತಿಪಥವಾಗಿವೆ ಎಂದು ಅಭಿಪ್ರಾಯಪಟ್ಟರು.

ಹರಪನಹಳ್ಳಿಯ ಪ್ರಾದೇಶಿಕ ವಲಯ ಅಧಿಕಾರಿ ಯು.ಜಿ. ಶರಣಪ್ಪ ಮಾತನಾಡಿ, ತರಳಬಾಳು ಮಠ ಮತ್ತು ವಿದ್ಯಾಸಂಸ್ಥೆಗಳು ಸಮಾಜ ಕಟ್ಟುವಲ್ಲಿ ಮುಂಚೂಣಿಯಲ್ಲಿವೆ. ಕಲೆ-ಸಂಸ್ಕೃತಿ ಉಳಿಸಿ ಬೆಳೆಸಲು ತರಳಬಾಳು ಹುಣ್ಣಿಮೆ, ವಚನ ಪ್ರಸಾರವೂ ಸೇರಿದಂತೆ, ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸುತ್ತ ಬಂದಿದೆ. ಸಮಾಜ ಕಟ್ಟುವ ಮಠದ ಕಾರ್ಯಗಳಿಗೆ ಸಾರ್ವಜನಿಕರು ಧರ್ಮಾತೀತ-ಜಾತ್ಯತೀತವಾಗಿ ಸಹಕರಿಸಬೇಕು ಎಂದು ಕೋರಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಗುರುಸಿದ್ದನಗೌಡ, ವೀರಶೈವ ಸಮಾಜದ ಹರಪನಹಳ್ಳಿ ತಾಲೂಕು ಅಧ್ಯಕ್ಷ ಮಂಜುನಾಥ ಗುಂಡಗತ್ತಿ, ಕೂಡ್ಲಿಗಿ ತಾಲೂಕು ಅಧ್ಯಕ್ಷ ರಾಜಶೇಖರ ಬಿ, ತರಳಬಾಳು ಕೂಡ್ಲಿಗಿ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಕೆ. ಬಿ. ಮಂಜುನಾಥ, ಉಪಾಧ್ಯಕ್ಷ ಬಿ.ನಾರಪ್ಪ, ಕಾರ್ಯದರ್ಶಿ ಕರಿಬಸವರಾಜ ಎಚ್, ಖಜಾಂಚಿ ಬಿ.ಶಿವಣ್ಣ, ಮುಖಂಡ ಕ್ಯಾರಿ ಚನ್ನಪ್ಪ, ಶಿಕ್ಷಣ ಸಂಯೋಜಕ ಮಂಜುನಾಥ, ಸಿಆರ್‌ಪಿ ಶೇಖರಪ್ಪ ಇತರರಿದ್ದರು.