ಕೂಡ್ಲಿಗಿ ಉಪ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಅರಣ್ಯ ಜೀವಿಗಳ ಪೋಷಣೆ ಹಾಗೂ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಎಸಿಎಫ್ ಭಾಸ್ಕರ್, ಉಪ ವಲಯ ಅರಣ್ಯಾಧಿಕಾರಿ ಸಂದೀಪ್ ನಾಯಕ, ಗುಡೇಕೋಟೆ ವಲಯ ಅರಣ್ಯಾಧಿಕಾರಿ ಜಗದೀಶ್, ಎಇಇ ಮಲ್ಲಿಕಾರ್ಜುನ ಇದ್ದರು. 
ಜಿಲ್ಲೆ

ಸೀತಾಫಲ ಕರಡಿಗಳು ತಿನ್ನಲಿ ಬಿಡಿ - ಶಾಸಕ ಡಾ ಎನ್.ಟಿ. ಶ್ರೀನಿವಾಸ್ ಸೂಚನೆ

ಶ್ರೀನಾಥ

ಕೂಡ್ಲಿಗಿ: ಗುಡೆಕೋಟೆ ಕರಡಿಧಾಮದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಬೆಳೆದಿರುವ ಸೀತಾಫಲಗಳನ್ನು ಗುತ್ತಿಗೆದಾರರಿಗೆ ನೀಡದೆ ಕರಡಿಗಳಿಗೆ ತಿನ್ನಲು ಬಿಡಿ ಎಂದು ಅಧಿಕಾರಿಗಳಿಗೆ ಶಾಸಕ ಡಾ ಎನ್.ಟಿ. ಶ್ರೀನಿವಾಸ್ ಸೂಚಿಸಿದರು.

ಪಟ್ಟಣದ ಉಪ ವಲಯ ಅರಣ್ಯ ಇಲಾಖೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅರಣ್ಯ ಜೀವಿಗಳ ಪೋಷಣೆ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಗುಡೆಕೋಟೆ ಕರಡಿಧಾಮದ ಕಕ್ಕುಪ್ಪಿ, ಜರಿಮಲೆ, ಅಪ್ಪೇನಹಳ್ಳಿ, ಸಿಡೇಗಲ್ಲು, ನರಸಿಂಹನಗಿರಿ, ಶ್ರೀಕಂಠಪುರ, ಕಸಾಪುರ, ಕರಡಿಹಳ್ಳಿ ಹಾಗೂ ಇತರ 30 ಕ್ಕೂ ಹೆಚ್ಚು ಹಳ್ಳಿಗಳ ಅರಣ್ಯ ಪ್ರದೇಶದಲ್ಲಿರುವ ಸೀತಾಫಲ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಹಣ್ಣಾಗುತ್ತವೆ.

ಅವುಗಳನ್ನು ಗುತ್ತಿಗೆದಾರರಿಗೆ ನೀಡದೆ ಕರಡಿಗಳ ಆಹಾರಕ್ಕಾಗಿ ಹಾಗೇ ಬಿಡಿ. ಅರಣ್ಯ ಸಂಪತ್ತು, ಬೆಟ್ಟ-ಗುಡ್ಡ, ನದಿ, ಕೆರೆಗಳನ್ನು ಸಂರಕ್ಷಿಸಬೇಕು. ಮುಂದಿನ ಪೀಳಿಗೆಗೆ ಸಸ್ಯ ಹಾಗೂ ಜೀವ ಸಂಕುಲ ಪೋಷಿಸಿ ಪರಿಸರದ ಸಮತೋಲನ ಕಾಪಾಡಿಕೊಳ್ಳಬೇಕು.

ಅರಣ್ಯ ಪ್ರದೇಶ ಹಾಗೂ ರಸ್ತೆ ಬದಿಯಲ್ಲಿರುವ ಗಿಡಗಳ ಪೋಷಣೆ ಸಮರ್ಪಕವಾಗಿರಲಿ. ರೈತರಿಗೆ ರಿಯಾಯಿತಿ ದರದಲ್ಲಿ ಹೆಚ್ಚಿನ ಸಸಿಗಳನ್ನು ವಿತರಿಸಿ, ಪರಿಸರ ಬೆಳವಣಿಗೆಗೆ ಶ್ರಮಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇನ್ನು ರೈತರು ಬಿತ್ತಿದ ಬೆಳೆಗಳನ್ನು ಕಾಡು ಹಂದಿಗಳು, ಕರಡಿಗಳು ನಾಶ ಪಡಿಸುತ್ತಿರುವ ಬಗ್ಗೆ ಹೆಚ್ಚು ದೂರು ಬರುತ್ತಿವೆ. ಪ್ರಾಣಿಗಳಿಂದ ಬೆಳೆ, ಪ್ರಾಣಹಾನಿ ಸಂಭವಿಸಿದರೆ ಪರಿಹಾರ ನೀಡುವುದಕ್ಕೆ ಅವಕಾಶ ಮಾಡಿಕೊಡಿ.

ಕರಡಿಗಳ ಉಪಟಳ ಬಗ್ಗೆ ಅಳವಾಗಿ ತಿಳಿದುಕೊಳ್ಳಬೇಕು. ಆಗ ಪ್ರಾಣಿಗಳ ನಿರ್ವಹಣೆ ಸುಲಭವಾಗುತ್ತದೆ. ಯಾರು ಕೂಡ ಬೇಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ತುರ್ತು ಪರಿಸ್ಥಿತಿ ನಿಭಾಯಿಸಲು ಸದಾ ಸಿದ್ಧರಿರಬೇಕು ಎಂದು ತಿಳಿಸಿದರು.