ಕೂಡ್ಲಿಗಿ: ಮಹಿಳೆಯರು ಪ್ರಸ್ತುತ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಪ್ರೌಢಿಮೆ ಮರೆಯುತ್ತಿದ್ದು, ಅದರಲ್ಲೂ ಸ್ವ ಸಹಾಯ ಸಂಘಗಳ ಮೂಲಕ ಆರ್ಥಿಕ ಚಟುವಟಿಕೆಗಳನ್ನು ಮಾಡುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದಿದ್ದಾರೆ ಎಂದು ತಾಪಂ ಇಒ ವೈ.ರವಿಕುಮಾರ್ ಹೇಳಿದರು.
ತಾಲೂಕಿನ ಸಾಮರ್ಥ್ಯ ಸೌಧದಲ್ಲಿ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ- ಸಿಡಾಕ್ ಇವರ ಸಂಯುಕ್ತ ಆಶ್ರಯದಲ್ಲಿ ಎನ್‌ಆರ್‌ಎಲ್‌ಎಮ್ ಯೋಜನೆಯಡಿ ಬರುವಂತಹ ಸ್ವ ಸಹಾಯ ಸಂಘಗಳ ಮಹಿಳೆಯರಿಗೆ ಆಯೋಜಿಸಿರುವ 6 ದಿನಗಳ ಉದ್ಯಮಶೀಲತಾ ತರಬೇತಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಸಂಘಗಳ ಮೂಲಕ ಹಣ ಉಳಿತಾಯ ಮಾಡಿ ಕುಟುಂಬದ ಆರ್ಥಿಕ ಹೊರೆಯನ್ನು ತಗ್ಗಿಸಿ ಮೇಲುಗೈ ಸಾಧಿಸುತ್ತಿರುವ ಸ್ತ್ರೀಯರು, ಅಬಲೆಯರಲ್ಲ ಎಂದು ಸಮಾಜಕ್ಕೆ ಸಂದೇಶ ರವಾನಿಸಿದ್ದಾರೆ. ಗ್ರಾಮೀಣ ಭಾಗದ ಯುವತಿಯರು ಮುಖ್ಯವಾಹಿನಿಗೆ ಬರಲು ಇಂತಹ ತರಬೇತಿಗಳನ್ನು ಪಡೆದುಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ ಬಲಗೊಳ್ಳಬೇಕು. ಈ ಆಶಯದೊಂದಿಗೆ ತರಬೇತಿಯನ್ನು ಆಯೋಜಿಸಲಾಗಿದೆ ಎಂದರು.
ಜಿಪಂ ಯೋಜನಾ ನಿರ್ದೇಶಕ ಅಶೋಕ್ ಹತೋಟದ, ಎನ್‌ಆರ್‌ಎಲ್‌ಎಮ್ ಯೋಜನೆಯಡಿ ಯುವ ವೃತ್ತಿಪರರಾದ ಕಾವ್ಯಾ, ಪ್ರೀತಮ್, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಎಚ್.ಎಂ. ಗಿರೀಶ್, ಎಂಐಎಸ್ ಕೋ ಆರ್ಡಿನೆಟರ್ ವೆಂಕನಾಯ್ಕ, ವಲಯ ಮೇಲ್ವಿಚಾರಕ ನರಸಿಂಹ, ತಾಲೂಕು ಸಂಪನ್ಮೂಲ ವ್ಯಕ್ತಿ ನೇತ್ರಾವತಿ ಇತರರು ಇದ್ದರು.