ಕೂಡ್ಲಿಗಿ: ಪತ್ರಕರ್ತರಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದ್ದು, ಜವಾಬ್ದಾರಿಯೂ ಹೆಚ್ಚಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾಧ್ಯಮವನ್ನು ಸಂವಿಧಾನದ ನಾಲ್ಕನೇ ಅಂಗ ಎಂದು ಕರೆಯುತ್ತಾರೆ. ಆ ನಂಬಿಕೆಯನ್ನು ಮಾಧ್ಯಮಗಳು ಉಳಿಸಿಕೊಳ್ಳಬೇಕು.
ಸತ್ಯಕ್ಕೆ ಚ್ಯುತಿ ಬಾರದಂತೆ ನೈಜ ಸುದ್ದಿಗಳನ್ನು ಪ್ರಕಟಿಸಬೇಕು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹೆಚ್ಚು ಹರಿದಾಡುತ್ತಿದ್ದು, ನಿಲ್ಲಬೇಕಿದೆ. ಸತ್ಯಾಂಶ ಅರಿತು ಸುದ್ದಿ ಮಾಡಬೇಕು. ಕ್ಷೇತ್ರದಲ್ಲಿ ಅನೇಕ ಜಲ್ವಂತ ಸಮಸ್ಯೆಗಳ ಕುರಿತು ಪತ್ರಕರ್ತರು ವರದಿ ಮಾಡಿದ್ದನ್ನು ಗಮನಿಸಿ ಬಗೆಹರಿಸಲಾಗಿದೆ.
ಇಂತಹ ಸುದ್ದಿಗಳು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ಮಾಡುತ್ತವೆ ಎಂದ ಅವರು, ಸ್ವಲ್ಪ ಪಹಣಿಯಲ್ಲಿ ತೊಂದರೆ ಇರುವ ಕಾರಣ ಬೇರೆ ಜಾಗ ಗುರುತಿಸಿ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ ಮಾತನಾಡಿ, ಗ್ರಾಮೀಣ ಪತ್ರಕರ್ತರಿಗೆ ಯಾವುದೇ ನಿಗದಿತ ವೇತನ ಇಲ್ಲ. ಅಲ್ಪ ಆದಾಯದಲ್ಲಿ ಜೀವನ ಸಾಗಿಸಬೇಕಿದೆ. ಬಿಡಿಸಿಸಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಮಾಡಿಸಿದರೆ ಅವರಿಗೆ ಸೂಕ್ತ ಸಾಲ, ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಲ್ಲದೆ ಯಶಸ್ವಿನಿ ಯೋಜನೆಯಡಿ 5 ಲಕ್ಷ ರೂ. ವೆಚ್ಚದ ಜೀವ ವಿಮಾ ಕಾರ್ಡ್ ನೀಡಲು ಮುಂದಾಗುವುದಾಗಿ ತಿಳಿಸಿದರು.
ಬಳಿಕ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ, ಕಾರ್ಯದರ್ಶಿ ಕೆ.ಲಕ್ಷ್ಮಣ, ರಾಜ್ಯ ಸಮಿತಿ ಸದಸ್ಯ ವೆಂಕೋಬನಾಯಕ, ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ತಾಪಂ ಇಒ ವೈ.ರವಿಕುಮಾರ್, ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಬುಡ್ಡಿ ಬಸವರಾಜ, ತಾಲೂಕು ಅಧ್ಯಕ್ಷ ಮಂಜು ಮಯೂರ, ಗೌರವಾಧ್ಯಕ್ಷ ಕಾವಲಿ ಶಿವಪ್ಪನಾಯಕ,
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ್, ನಾಗಮಣಿ ಜಿಂಕಾಲ್, ಟಿ.ಜಿ.ಮಲ್ಲಿಕಾರ್ಜುನ ಗೌಡ, ಉದಯ ಜನ್ನು, ಕೋಗಳಿ ಮಂಜುನಾಥ, ಢಾಣಿ ರಾಘವೇಂದ್ರ, ಹಿರೇಕುಂಬಳಗುಂಟೆ ಉಮೇಶ್, ಓಬಣ್ಣ,ಕೆ.ಈಶಪ್ಪ, ಎಚ್.ವೀರಭದ್ರಪ್ಪ ಇತರರಿದ್ದರು.