ಕೂಡ್ಲಿಗಿ: ಕ್ಷೇತ್ರದ ಗುಡ್ಡಗಾಡಿನ ಜನರ ಸಾಮಾಜಿಕ ಸುಧಾರಣೆಗೆ ಆದ್ಯತೆ ನೀಡಿ ಗುಣಮಟ್ಟದ ಶಾಲೆ, ಬೀದಿ ದೀಪಗಳ ಅಳವಡಿಕೆ ಹಾಗೂ ಸಿಸಿ ರಸ್ತೆಗಳ ನಿರ್ಮಾಣಕ್ಕೆ ಮುಂದಾಗುವೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ನರಸಿಂಹಗಿರಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉನ್ನತೀಕರಣ, ಸಿಸಿ ರಸ್ತೆ ಹಾಗೂ ಬೀದಿ ದೀಪಗಳ ಅಳವಡಿಕೆ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಅತಿ ಹಿಂದುಳಿದ ಪ್ರದೇಶದಲ್ಲಿ ಇಂದಿಗೂ ಕನಿಷ್ಠ ಸೌಲಭ್ಯಗಳು ಮರೀಚಿಕೆಯಾಗಿವೆ ಎಂದರು.
ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ವಾಸಿಸುತ್ತಿದ್ದು, ಅವರಿಗೆ ಮೂಲ ಸೌಕರ್ಯಗಳು ಸಿಕ್ಕಿಲ್ಲ. ಇದನ್ನು ಮನಗಂಡು ಕರಡಿಹಳ್ಳಿ, ಮಾಕನಡಕು ಹಾಗೂ ಮಡಕಲಕಟ್ಟೆಯಲ್ಲಿ ತಲಾ 20 ಲಕ್ಷ ರೂ., ಕಡೇಕೊಳ್ಳದಲ್ಲಿ 1 ಕೋಟಿ ರೂ., ಹೊಸಹಟ್ಟಿಯಲ್ಲಿ 25 ಲಕ್ಷ ರೂ., ಕೆಳಗಿನ ಕರ್ನಾರಹಟ್ಟಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಭೀಮಸಮುದ್ರ 17.60 ಲಕ್ಷ ರೂ., ಎಂ.ಬಿ.ಅಯ್ಯನಹಳ್ಳಿಯಲ್ಲಿ 9.90 ಲಕ್ಷ ರೂ., ಚಿಕ್ಕಜೋಗಿಹಳ್ಳಿಯಲ್ಲಿ 47.10 ಲಕ್ಷ ರೂ., ವಲಸೆ ಗ್ರಾಮದಲ್ಲಿ 10.50 ಲಕ್ಷ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕ್ಷೇತ್ರದ 215 ಹಳ್ಳಿಗಳಿಗೂ ಅಗತ್ಯ ಮೂಲ ಸೌಕರ್ಯ ಒದಗಿಸಲು ರೂಪುರೇಷೆ ತಯಾರಿಸಿದ್ದು, ಹಂತ-ಹಂತವಾಗಿ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಓಬಮ್ಮ, ಎಪಿಎಂಸಿ ಅಧ್ಯಕ್ಷ ಬೋಸಯ್ಯ, ಪಿಡಿಒ ಹನುಮಂತಪ್ಪ, ತಾಪಂ ಮಾಜಿ ಸದಸ್ಯ ಮಂಜುನಾಥ, ಗ್ರಾಪಂ ಸದಸ್ಯರಾದ ಭೀಮಮ್ಮ, ಜಯರಾಮ, ಬೋರಪ್ಪ, ಶರಣಪ್ಪ, ಕೃಷ್ಣಪ್ಪ, ಮುಖಂಡರಾದ ಈಶಪ್ಪ, ಮಹಾಬಲೇಶ, ಓಬಣ್ಣ, ಶಾಂತಕುಮಾರ, ಬಸಣ್ಣ, ಸುರೇಶ, ಗೌಡ್ರು ಬಸಣ್ಣ, ಮಾರಣ್ಣ, ಕೆಂಗೋಬಯ್ಯ ಇದ್ದರು.