ಕೂಡ್ಲಿಗಿ: ಕೆಎಂಎಫ್ ಖರೀದಿ ಮಾಡುತ್ತಿರುವ ಹಾಲಿನ ಬೆಲೆಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಾಲು ಉತ್ಪಾದಕರ ಹಿತ ರಕ್ಷಣಾ ಸಮಿತಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸರ್ಕಾರ ರೈತರು ಉತ್ಪಾದಿಸುತ್ತಿರುವ ಹಾಲಿನ ಬೆಲೆ ಏರಿಕೆ ಮಾಡಲಾಗುವುದು ಎಂದು ಸರ್ಕಾರ ಹೇಳಿತ್ತು. ಆದರೆ, ಬೆಲೆ ಏರಿಕೆ ಮಾಡದೇ ಈಗ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಲಕ್ಷಾಂತರ ರೈತರು ಕೃಷಿ ಜತೆಗೆ ಉಪ ಕಸುಬಾಗಿ ಹೈನುಗಾರಿಕೆ ಮಾಡುತ್ತಿದ್ದಾರೆ. ಜೀವನದ ಅವಶ್ಯ ವಸ್ತುಗಳು ಸೇರಿ ಪಶು ಆಹಾರ ಬೆಲೆ ಏರಿಕೆಯಾಗಿದೆ. ಪಶು ಚಿಕಿತ್ಸಾ ವೆಚ್ಚವೂ ಏರಿದೆ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಅನೇಕ ದಿನಗಳಿಂದ ಹಾಲಿನ ಬೆಲೆ ಹೆಚ್ಚಳ ಮಾಡಿಲ್ಲ. ಈಗ ಸಹ ಬೆಲೆ ಏರಿಕೆಯನ್ನು ಸರ್ಕಾರ ಕೈಬಿಟ್ಟಿದೆ. ಪ್ರತಿ ಲೀಟರ್ ಹಾಲಿನ ಬೆಲೆಯನ್ನು 50 ರೂ.ಗೆ ಏರಿಕೆ ಮಾಡುವ ಮೂಲಕ ಸರ್ಕಾರ ರೈತರ ನೆರವಿಗೆ ಬರಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ತಹಸೀಲ್ದಾರ್ ಟಿ.ಜಗದೀಶ್‌ಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.