ಕೂಡ್ಲಿಗಿ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಚಿಂತನ-ಚೇತನ ಸರಣಿ ಕಾರ್ಯಕ್ರಮದಲ್ಲಿ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದ ಶ್ರೀಗಳು ಕಾರ್ಯಕ್ರಮದ ಯೂ ಟ್ಯೂಬ್ ಅನ್ನು ಬಿಡುಗಡೆ ಮಾಡಿದರು. 
ಜಿಲ್ಲೆ

ಮನುಷ್ಯನ ದೇಹ ದೇವರ ಅದ್ಭುತ ಸೃಷ್ಟಿ

ಕೂಡ್ಲಿಗಿ: ಪಂಚಭೂತಗಳಿಂದ ಮಾಡಿದ ಈ ದೇಹ ಸೃಷ್ಟಿ ಕರ್ತನ ಅದ್ಭುತಗಳಲ್ಲೊಂದು ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧ ಮಹಾ ಸ್ವಾಮೀಜಿ ಹೇಳಿದರು. ಜೆಸಿಐ ಕೂಡ್ಲಿಗಿ ಗೋಲ್ಡನ್, ಗಾಂಧಿ ಸ್ಮಾರಕ ಸಮಿತಿ ಹಾಗೂ ಮೈದಾನ ಗೆಳೆಯರ ಬಳಗ ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘ಚಿಂತನ- ಚೇತನ’ ಕಾರ್ಯಕ್ರಮದ 59ನೇ ಸರಣಿಯಲ್ಲಿ ಆರ್ಶಿವಚನ ನೀಡಿದರು.

ಮಾನವ ಸೇರಿ ಲಕ್ಷಾಂತರ ಜೀವಿಗಳನ್ನು ನಿರ್ಮಿಸಿ ಅವುಗಳಿಗೆ ಆಹಾರ ನೀಡಿ, ಅವುಗಳಿಂದ ಕ್ರಿಯೆಗಳನ್ನು ಮಾಡಿಸುವ ಭಗವಂತನ ಲೀಲೆ ಅದ್ಭುತವಾದದ್ದು. ಈ ದೇಹದಲ್ಲಿನ ಸುಖ, ದುಃಖಗಳಿಗೆ ಮನಸ್ಸು ಕಾರಣ. ಮನಸ್ಸು ಒಳ್ಳೆಯದನ್ನೂ ಮಾಡಿಸುತ್ತದೆ. ಕೆಟ್ಟದನ್ನೂ ಮಾಡಿಸುತ್ತದೆ. ಸ್ವರ್ಗ, ನರಕಗಳನ್ನು ಸೃಷ್ಟಿಸುವುದೇ ಮನಸ್ಸು. ಮನಸ್ಸನ್ನು ಅರಿಯಲಿಕ್ಕೆ ಸಾಧ್ಯವಿಲ್ಲ. ಉನ್ನತ ಸ್ಥಾನಕ್ಕೆ ಕರೆದು ಕೊಂಡು ಹೋಗಿ, ನಂತರ ಪ್ರಪಾತಕ್ಕೆ ಬೀಳಿಸುವ ಶಕ್ತಿ ಈ ಮನಸ್ಸಿಗಿದೆ. ಮನಸ್ಸೀನ ಲೀಲಾ ವಿಲಾಸವೇ ಈ ಜೀವನ. ಮನಸ್ಸು ಹೊಲ ಇದ್ದಂತೆ. ನಾವುಗಳು ಜೋಳ ಬಿತ್ತಿದ್ದರೂ ನಡುವೆ ಕಸ ಹುಟ್ಟುತ್ತದೆ. ಆ ಕಸ ತೆಗೆದು, ಬೆಳೆ ಬೆಳೆಯುವನು ಜಾಣ ರೈತ. ಮನುಷ್ಯ ಮನಸ್ಸೆಂಬ ಭೂಮಿಯೊಳಗೆ ಬೆಳೆದ ದುರ್ಗುಣ ಎಂಬ ಕಳೆ ತಗೆಯಬೇಕು. ಒಳ್ಳೆ ಗುಣಗಳೆಂಬ ಬೆಳೆ ಬೆಳೆಯಬೇಕು ಎಂದರು.

ಭಗವಂತ ಸೃಷ್ಟಿಸಿದ ಈ ದೇಹದಲ್ಲಿ ನೆನಪಿನ ಶಕ್ತಿ ಆಗಾಧವಾದದ್ದು. ಹುಟ್ಟಿನಿಂದ ಸಾಯುವವರೆಗೆ ಆ ನೆನಪಿನ ಶಕ್ತಿಗೆ ಮುಪ್ಪಿಲ್ಲ. ಆದ್ದರಿಂದ ಬುದ್ಧ್ದ, ಬಸವ, ವಿವೇಕಾನಂದರಂತೆ ಉತ್ತಮ ಚಿಂತನೆಗಳನ್ನು ರೂಪಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕಬೇಕು ಎಂದರು.

ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿ ಮಾತಾನಾಡಿ,ನಾಡು ಕಂಡ ಅತ್ಯುತ್ತಮ ಸಂತರಲ್ಲಿ ಕೊಪ್ಪಳ ಗವಿಶ್ರೀಗಳು ಪ್ರಮುಖರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತ್ರಿವಿಧ ದಾಸೋಹದ ಮಹತ್ವವನ್ನು ಸಾರಿದ ಈ ಶತಮಾನದ ಸಂತರು. ಇವರ ಪ್ರವಚನದಿಂದ ಲಕ್ಷಾಂತರ ಜನರು ಪ್ರಭಾವಿತರಾಗಿ ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ. ಅವರ ಪ್ರವಚನಕ್ಕೆ ಅಂತಹ ಶಕ್ತಿ ಇದೆ ಎಂದರು.

ಪಪಂ ಅಧ್ಯಕ್ಷೆ ಎಂ.ಶಾರದಾಬಾಯಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷೆ ರೇಣುಕಾ ದುರುಗೇಶ್, ಜೆಸಿಐ ಅಧ್ಯಕ್ಷ ಅಕ್ಕಿ ಕೊಟ್ರೇಶ್, ಗಾಂಧಿ ಸ್ಮಾರಕ ಸಮಿತಿಯ ಅಧ್ಯಕ್ಷ ಡಿ.ನಾಗರಾಜ, ತಹಸೀಲ್ದಾರ್ ಟಿ.ಜಗದೀಶ್, ಡಿವೈಎಸ್ಪಿ ಜಿ.ಹರೀಶ್, ಸಿಪಿಐ ವಸಂತ ಅಸೋದೆ, ಕೊಟ್ಟೂರು ಸಿಪಿಐ ಸೋಮಶೇಖರ ಕೆಂಚರೆಡ್ಡಿ, ಮುಖಂಡರಾದ ಕೆ.ಎಂ.ತಿಪ್ಪೇಸ್ವಾಮಿ, ಕಾವಲಿ ಶಿವಪ್ಪನಾಯಕ, ನಾಗಮಣಿ ಜಿಂಕಾಲ್, ಬಂಗಾರು ಹನುಮಂತು, ಸೂರ್ಯ ಪಾಪಣ್ಣ, ಪಾಪನಾಯಕ, ಗುಳಿಗಿ ವೀರೇಂದ್ರ, ಉದಯ್ ಜನ್ನು, ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ಸುರೇಶ್ ಇತರರು ಇದ್ದರು.