ಕೂಡ್ಲಿಗಿ: ಕೂಡ್ಲಿಗಿ ಉಪ ಮಾರುಕಟ್ಟೆ ಹಾಗೂ ಕೊಟ್ಟೂರು ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕೆಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ (ಹು.ಮಂಜುನಾಥ ಬಣ) ಪದಾಧಿಕಾರಿಗಳು ಮಂಗಳವಾರ ತಹಸೀಲ್ದಾರ್ ಎಸ್.ಮಹಾಬಲೇಶ್ವರಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ದೇವರಮನಿ ಮಹೇಶ ಮಾತನಾಡಿ, ಈ ಬಾರಿ ಅತಿಯಾದ ಮಳೆಯಿಂದ ಜಮೀನುಗಳಲ್ಲಿ ಇದ್ದ ಬೆಳೆಗಳು ಅರ್ಧಕ್ಕಿಂತ ಹೆಚ್ಚು ಮೊಳಕೆ ಬಂದು ರೈತರಿಗೆ ನಷ್ಟವಾಗಿದೆ. ಕೇಂದ್ರ ಸರ್ಕಾರದ ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ಅನುಕೂಲವಾಗಿದೆಂದು ಕೃಷಿ ಸಚಿವರು ಹೇಳಿದ್ದಾರೆ. ಆದರೆ, ಬೆಳೆಗಳ ದರ ಪಾತಾಳಕ್ಕೆ ಕುಸಿದಿದೆ. ಕ್ವಿಂಟಾಲ್ ಮೆಕ್ಕೆಜೋಳ 2 ಸಾವಿರ ರೂ.ಗೆ ಖರೀದಿಸುತ್ತಿಲ್ಲ. ಆದ್ದರಿಂದ ಜಿಲ್ಲಾ ಅಧಿಕಾರಿಗಳು ಕೂಡ್ಲಿಗಿ ಉಪ ಮಾರುಕಟ್ಟೆ, ಕೊಟ್ಟೂರು ಮಾರುಕಟ್ಟೆಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದು ಮೆಕ್ಕೆಜೋಳ ಕ್ವಿಂ.ಗೆ 2000 ರೂ.ದರದಲ್ಲಿ ಖರೀದಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಉಪಾಧ್ಯಕ್ಷ ಎಂ. ಸೋಮಣ್ಣ, ತಾಲೂಕು ಅಧ್ಯಕ್ಷ ಬಿ.ಚನ್ನಬಸಪ್ಪ, ಮುಖಂಡರಾದ ಅಧ್ಯಕ್ಷ ಮೌಲಾ, ಕೆ.ಶೇಷಪ್ಪ, ಎಚ್.ಪರಸಪ್ಪ, ಬಿ.ಭೀಮಪ್ಪ, ಎಂ. ಬಸವರಾಜ ಇತರರಿದ್ದರು.