ಶಿರಸ್ತೇದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಕೆ
ಕೂಡ್ಲಿಗಿ: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಹಾಗೂ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಶುಕ್ರವಾರ ಶಿರಸ್ತೇದಾರ್ ಎಂ.ಎಸ್.ಗೌಸ್ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಕಾರ್ಮಿಕ ಮುಖಂಡ ಸಿ. ವಿರೂಪಾಕ್ಷಪ್ಪ ಮಾತಾನಾಡಿ, ಕಳೆದ ನಾಲ್ಕು ವರ್ಷಗಳಿಂದ ಬರಗಾಲ, ಕೋವಿಡ್ ಅವಾಂತರ ಹಾಗೂ ಪ್ರಕೃತಿ ವಿಕೋಪದಿಂದ ಜನಸಾಮಾನ್ಯರು ತತ್ತರಿಸಿಹೋಗಿದ್ದಾರೆ. ಪ್ರಸಕ್ತ ವರ್ಷವೂ ಅತಿವೃಷ್ಟಿಯಿಂದ ರೈತರ ಬದುಕು ನೀರಿನಲ್ಲಿ ಕೊಚ್ಚಿಹೋಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ, ರೈತರ ಬಂಡವಾಳ ನಷ್ಟದ ಬಗ್ಗೆ ಮಾತಾನಾಡದೆ, ಕೃಷಿ ಭೂಮಿ, ವಿದ್ಯುತ್,ನೀರು ಇತ್ಯಾದಿ ಅಮೂಲ್ಯ ಆಸ್ತಿಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ ಧಾರೆ ಎರೆಯಲು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಹಮ್ಮಿಕೊಂಡಿದೆ. ಇದೊಂದು ರೈತ ವಿರೋಧಿ ಹಾಗೂ ಜನ ವಿರೋಧಿ ಕಾರ್ಯ ಎಂದು ದೂರಿದರು.
ಸರ್ಕಾರ ಭೂ ಸುಧಾರಣೆ, ಎಪಿಎಂಸಿ ಹಾಗೂ ವಿದ್ಯುತ್ ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ಕೆಐಎಡಿಬಿಗೆ ಹೆಚ್ಚು ಅಧಿಕಾರ ನೀಡಿ ರೈತರ ಫಲವತ್ತಾದ ಭೂಮಿ ವಶಪಡಿಸಿಕೊಳ್ಳಲಾಗಿದೆ. ಇತ್ತ ಕೃಷಿ ಚಟುವಟಿಕೆ ಅತ್ತ ಕೈಗಾರಿಕೆಗಳನ್ನೂ ಆರಂಭಿಸಿಲ್ಲ. ಇದರಿಂದ ಭೂಮಿ ಪಾಳುಬಿದ್ದಿವೆ. ಉದ್ಯೋಗ ಸೃಷ್ಟಿ ಮಾತಲ್ಲಷ್ಟೇ ಆಗಿದೆ. ಪರಿಸ್ಥಿತಿ ಹೀಗಿರುವಾಗ ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನ ನಡೆಸುವುದು ನಿರರ್ಥಕ. ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಸಂಘದ ತಾಲೂಕು ಸಂಚಾಲಕ ಜಿ.ಓಬಯ್ಯ, ಕಾರ್ಮಿಕ ಮುಖಂಡರಾದ ಗುನ್ನಳ್ಳಿ ರಾಘವೇಂದ್ರ, ಜೆ.ಹಾಲೇಶ್, ಮೆಬೂಬ್ ಸಾಬ್, ಕೃಷ್ಣಾನಾಯ್ಕ, ಕೊತ್ಲೇಶ, ಬಡಿಗೇರ ಶ್ರೀಧರ, ಕರಿಯಣ್ಣ, ಮರುಳಸಿದ್ದಾಚಾರಿ ಇತರರಿದ್ದರು.