ಕೂಡ್ಲಿಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಚೇರಿಯಲ್ಲಿ ಹಾನಗಲ್ಲ ಕುಮಾರ ಶಿವಯೋಗಿಗಳ ಜಯಂತಿ ಕಾರ್ಯಕ್ರಮ ನಡೆಯಿತು. ಮಹಾಸಭಾ ತಾಲೂಕು ಅಧ್ಯಕ್ಷ ಸುನೀಲ್ ಗೌಡ, ಕಾರ್ಯದರ್ಶಿ ಜಿ.ಎಸ್.ಗಿರೀಶ್, ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ಎಸ್.ಸುರೇಶ್, ಪ್ರಮುಖರಾದ ನಂದಿ ಬಸವರಾಜ, ಸಿಡೇಗಲ್ಲು ಬಸವರಾಜ ಇದ್ದರು. 
ಜಿಲ್ಲೆ

ಸಮಾಜ ಒಗ್ಗೂಡುವಿಕೆಗೆ ಹಾನಗಲ್ಲ ಶ್ರೀಗಳ ಕೊಡುಗೆ ಅಪಾರ

ಶಾಮಸುಂದರ್ ಕೊಪ್ಪಳಕರ್

ಕೂಡ್ಲಿಗಿ: ಹರಿದು ಹಂಚಿಹೋಗಿದ್ದ ವೀರಶೈವ ಸಮಾಜವನ್ನು ಒಗ್ಗೂಡಿಸುವಲ್ಲಿ ಹಾನಗಲ್ಲ ಕುಮಾರ ಶಿವಯೋಗಿಗಳ ಕೊಡುಗೆ ಅಪಾರ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಸುನೀಲ್ ಗೌಡ ಹೇಳಿದರು.

ಪಟ್ಟಣದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಚೇರಿಯಲ್ಲಿ ಗುರುವಾರ ಹಾನಗಲ್ಲ ಕುಮಾರ ಶಿವಯೋಗಿಗಳ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಾನಗಲ್ ಕುಮಾರ ಶಿವಯೋಗಿಗಳು ಶಿವಯೋಗಮಂದಿರದಲ್ಲಿ ಸಮಾಜ ಸುಧಾರಣೆಗಾಗಿಗೆ ಉತ್ತಮ ವಟುಗಳನ್ನು ನಿರ್ಮಿಸುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಅವರು ಮಹಾನ್ ಸಿದ್ಧಪುರುಷರು, ದೂರದೃಷ್ಠಿಯುಳ್ಳ ದಾರ್ಶನಿಕರು. ಸಮಾಜ ಸೇವೆಯೇ ನಿಜವಾದ ಶಿವಪೂಜೆ ಎಂಬುದನ್ನು ಅರಿತುಕೊಂಡಿದ್ದರು. 12ನೇ ಶತಮಾನದ ಸಾಮಾಜಿಕ ಕ್ರಾಂತಿ ತೆರೆಗೆ ಸರಿಯುತ್ತಿರುವ ಸಂದರ್ಭದಲ್ಲಿ ಹಾನಗಲ್ ಕುಮಾರಸ್ವಾಮಿ ಅವರು ಹೊಸ ರೂಪ ಕೊಟ್ಟ ದಿವ್ಯಚೇತನ ಎಂದು ತಿಳಿಸಿದರು.

ಇಂದು ಜಗತ್ತು ಯೋಗಮಯವಾಗುತ್ತಿದೆ. ಐದು ಸಾವಿರ ವರ್ಷಗಳ ಯೋಗ ಪರಂಪರೆ ಕನ್ನಡನಾಡಿನಲ್ಲಿ ಮಾಯವಾಗುತ್ತಿರುವ ಸಮಯದಲ್ಲಿ ನೂರು ವರ್ಷಗಳ ಹಿಂದೆ ಶಿವಯೋಗಿ ಮಂದಿರ ಸ್ಥಾಪಿಸಿ ಅಲ್ಲಿರುವ ಸಾಧಕರಿಗೆ ಅಷ್ಟಾಂಗಯೋಗ, ಹಠಯೋಗ, ರಾಜಯೋಗ, ಶಿವಯೋಗ ತರಬೇತಿ ನೀಡಿದರು. ಸಹಸ್ರಾರು ಶ್ರೇಷ್ಠ ಸ್ವಾಮೀಜಿ, ಶಿವಯೋಗಿ ಹಾಗೂ ಸಿದ್ಧಪುರುಷರನ್ನು ಸೃಷ್ಟಿಸಿದರು ಎಂದು ಸ್ಮರಿಸಿದರು.

ಮಹಾಸಭಾ ತಾಲೂಕು ಕಾರ್ಯದರ್ಶಿ ಜಿ.ಎಸ್.ಗಿರೀಶ್, ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ಎಸ್.ಸುರೇಶ್, ಪ್ರಮುಖರಾದ ನಂದಿ ಬಸವರಾಜ, ಸಿಡೇಗಲ್ಲು ಬಸವರಾಜ, ಸೋಮಶೇಖರ ಪಾಟೀಲ, ಬಿ.ಎಂ.ಗುರು, ಸೋಮಶೇಖರ ಆರಾಧ್ಯ, ವೀರೇಶ್ ಅಂಗಡಿ, ಬಣಕಾರ ಮೂಗಪ್ಪ, ಗಂಗಾಧರ ಇದ್ದರು.