ಕೂಡ್ಲಿಗಿಯ ಮನೆಯೊಂದರಲ್ಲಿ ಶುಕ್ರವಾರ ವರ ಮಹಾಲಕ್ಷ್ಮೀಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. 
ಜಿಲ್ಲೆ

ಕೂಡ್ಲಿಗಿಯಲ್ಲಿ ಸುಮಂಗಲಿಯರಿಗೆ ಫಲ-ತಾಂಬೂಲ ವಿತರಣೆ

ಕೂಡ್ಲಿಗಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ಹಣ್ಣು, ಹೂ, ಬಾಳೆಕಂಬ ಹಾಗೂ ಮಾವಿನ ತೋರಣಗಳ ಮಾರಾಟ ಜೋರಾಗಿತ್ತು. ಹೂ, ಹಣ್ಣು, ವೀಳ್ಯದೆಲೆ ಬೆಲೆ ಗಗನಕ್ಕೇರಿದರೂ ಮಹಿಳೆಯರು ಖರೀದಿಸಿ ತಂದು ಹಬ್ಬ ಆಚರಿಸಿದರು. ಮನೆಯಂಗಳದಲ್ಲಿ ಸಗಣಿಯಿಂದ ಸಾರಿಸಿ ರಂಗೋಲಿ ಬಿಡಿಸಿದ್ದರು.

ಮಹಿಳೆಯರು ಮಕ್ಕಳು ಹೊಸಬಟ್ಟೆಯಲ್ಲಿ ಕಂಗೊಳಿಸಿದರು. ಪೂಜೆಗೆ ಕಳಸ ಇರಿಸಿ, ಲಕ್ಷ್ಮೀಗೆ ಬಗೆ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಹಣ, ಒಡವೆಗಳನ್ನು ಇರಿಸಿ ಆರತಿ ಬೆಳಗಿದರು. ನೈವೇದ್ಯವಿಟ್ಟು ಪೂಜೆ ಸಲ್ಲಿಸಿದರು.

ನಂತರ ಸುಮಂಗಲಿಯರಿಗೆ ಬಾಗಿನ ನೀಡಿ ಗೌರವಿಸಿದರು. ನೆರೆಹೊರೆಯವರನ್ನು ಕರೆದು ಅರಿಶಿಣ, ಕುಂಕುಮ ಹಚ್ಚಿ, ಫಲ, ತಾಂಬೂಲ ನೀಡಿ ಕೃತಾರ್ಥರಾದರು.