ಕೂಡ್ಲಿಗಿ: ಕರೊನಾ ಕರ್ಫ್ಯೂ ಜಾರಿಯಲ್ಲೂ ಪಟ್ಟಣದಲ್ಲಿ ಶುಕ್ರವಾರ ವಾರದ ಸಂತೆ ನಿರಾತಂಕವಾಗಿ ನಡೆಯಿತು. ಹಿಂದಿನ ವಾರವೇ ತಾಲೂಕು ಮತ್ತು ಪಪಂ ಆಡಳಿತ ವಾರದ ಸಂತೆ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಎಂದಿನಂತೆಯೇ ಸಾವಿರಾರು ನೂರಾರು ಜನರೊಂದಿಗೆ ಸಂತೆ ನಡೆಯಿತು.
ಬೆಳಗ್ಗೆಯೇ ಸಂತೆ ನಡೆಯುವುದನ್ನು ನಿಯಂತ್ರಿಸಬೇಕಿದ್ದ ಅಧಿಕಾರಿಗಳು ತಡವಾಗಿ ಬಂದಿದ್ದರಿಂದ ಹೊಸಪೇಟೆ, ಕೊಟ್ಟೂರು ಸೇರಿ ವಿವಿಧೆಡೆಯಿಂದ ಆಗಮಿಸಿದ್ದ ಮಾರಾಟಗಾರರು ಪ್ರತಿ ವಾರದಂತೆಯೇ ತಮ್ಮ ತಮ್ಮ ಸ್ಥಳದಲ್ಲಿ ಅಂಗಡಿ ಹಾಕಿಕೊಂಡು ವ್ಯಾಪಾರ ನಡೆಸಿದರು. ಸಂತೆ ನಡೆಯುವ ವಿಚಾರ ತಿಳಿದ ಗ್ರಾಹಕರು ಸ್ಥಳಕ್ಕೆ ದೌಡಾಯಿಸಿ ಗುಂಪು ಗುಂಪಾಗಿಯೇ ತರಕಾರಿ ಖರೀದಿಸಿದರು. ಮುಖ್ಯ ರಸ್ತೆ ಬದಿಯೇ ಮಾರುತ್ತಿದ್ದ ಹಣ್ಣುಗಳನ್ನು ಕೊಳ್ಳಲು ಜನರು ಮುಗಿ ಬಿದ್ದಿದ್ದರು.
ಅಗತ್ಯವಲ್ಲದ ಮೊಬೈಲ್, ಜವಳಿ ಸೇರಿ ನಾನಾ ಅಂಗಡಿಗಳನ್ನು ಓಪನ್ ಮಾಡಿ ವ್ಯಾಪಾರ ನಡೆಸುತ್ತಿದ್ದ ದೃಶ್ಯ ಪಟ್ಟಣದಲ್ಲಿ ಸಾಮಾನ್ಯವಾಗಿತ್ತು. 10 ಗಂಟೆ ನಂತರ ಬಂದ ಪೊಲೀಸರು ಸಂತೆಯಲ್ಲಿ ಸೇರಿದ್ದ ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. ಇದರಿಂದ ಕೈಚಲ್ಲಿದ ಸಿಬ್ಬಂದಿ, ಸಿಕ್ಕ ಕೆಲವರಿಗೆ ದಂಡ ಹಾಕಿ ಅಲ್ಲಿಂದ ತೆರಳಿದರು.