ಕೂಡ್ಲಿಗಿ ನ್ಯಾಯಲಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯನ್ನು ಕಿರಿಯ ಶ್ರೇಣಿ ನ್ಯಾಯಾಧೀಶ ಮುರುಗೇಂದ್ರ ತುಬಾಕೆ ಉದ್ಘಾಟಿಸಿದರು. 
ಜಿಲ್ಲೆ

ಸಂವಿಧಾನ ಆಶಯ ಈಡೇರಿಸೋಣ- ಕಿರಿಯ ನ್ಯಾಯಾಧೀಶ ಮುರುಗೇಂದ್ರ ತುಬಾಕೆ ಕರೆ

ಕೂಡ್ಲಿಗಿ: ಸಾಮಾಜಿಕ ನ್ಯಾಯ ನಮ್ಮ ಸಂವಿಧಾನದ ಆಶಯ. ಆ ಆಶಯಗಳನ್ನು ಈಡೇರಿಸುವ ಸಂಕಲ್ಪ ಪ್ರತಿಯೊಬ್ಬರೂ ಮಾಡೋಣ ಎಂದು ಕಿರಿಯ ಶ್ರೇಣಿ ನ್ಯಾಯಾಧೀಶ ಮುರುಗೇಂದ್ರ ತುಬಾಕೆ ಹೇಳಿದರು. ಪಟ್ಟಣದ ನ್ಯಾಯಲಯ ಸಭಾಂಗಣದಲ್ಲಿ ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ ಸೋಮವಾರ ಏರ್ಪಡಿಸಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದರು.

ಸಾಮಾಜಿಕ ನ್ಯಾಯ ರಾಷ್ಟ್ರಗಳ ಒಳಗೆ ಶಾಂತಿಯುತ ಮತ್ತು ಸಹಬಾಳ್ವೆಗೆ ಆಧಾರವಾಗಿರುವ ತತ್ವ. ವಿಶ್ವದಾದ್ಯಂತ ಲಿಂಗ, ವಯಸ್ಸು, ಜನಾಂಗ, ಜಾತಿ, ಧರ್ಮ, ವರ್ಣ, ಸಂಸ್ಕೃತಿ, ಅಂತಸ್ತು ಮುಂತಾದ ಭೇದ-ಭಾವಗಳ ತಾರತಮ್ಯ ತೊಡೆದು ಹಾಕುವ ಪ್ರಯತ್ನಗಳಿಗೆ ಪ್ರೋತ್ಸಾಹಿಸಲು ಮತ್ತು ಸಾಮಾಜಿಕ ಅಸಮಾನತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಸಾಮಾಜಿಕ ಅಸಮಾನತೆಯನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಿ, ಸಾಮಾಜಿಕ ಸಮಾನತೆ ಸಾಧಿಸಲು ವಿಶ್ವ ಸಾಮಾಜಿಕ ನ್ಯಾಯ ದಿನ ಆಚರಿಸಲಾಗುತ್ತಿದೆ ಎಂದರು.

ಕಾನೂನು ನಾಡಿನ ಎಲ್ಲರಿಗೂ ಸಮಾನ. ಸಮಬಾಳು ಸಮಪಾಲು ಸಂವಿಧಾನದ ಆಶಯವಾಗಿದ್ದು, ಅದನ್ನು ಅನುಷ್ಠಾನ ಮಾಡಲು ಸರ್ಕಾರ ಮಾತ್ರ ಪ್ರಯತ್ನಿಸಿದರೆ ಸಾಲದು. ಎಲ್ಲರ ಪ್ರಯತ್ನ ಮುಖ್ಯ ಎಂದು ಹೇಳಿದರು. ಸಾಮಾಜಿಕ ನ್ಯಾಯದ ಕುರಿತು ವಕೀಲ ಸಿ.ವಿರುಪಾಕ್ಷಪ್ಪ ಉಪನ್ಯಾಸ ನೀಡಿದರು. ಸಹಾಯಕ ಸರ್ಕಾರಿ ಅಭಿಯೋಜಕಿ ವೈ.ಶಿಲ್ಪಾ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಜಿ.ಹೊನ್ನೂರಪ್ಪ, ವಕೀಲರಾದ ಬಾಷಾ, ಶೈಲಜಾ ಇತರರಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿವಿಧತೆಯಲ್ಲಿ ಏಕತೆಯ ಕಾರಣಕ್ಕಾಗಿ ಭಾಷೆ, ಆಚಾರ-ವಿಚಾರ, ಸಂಪ್ರದಾಯ, ಕುಲ ಕಸುಬುಗಳಲ್ಲಿ ವಿವಿಧತೆ ಇದೆ. ಅದು ಗಳಿಕೆಯಲ್ಲೂ ಲಾಭ ತಂದು ಕೊಡುವುದರಲ್ಲೂ ವ್ಯತ್ಯಾಸಕ್ಕೆ ಕಾರಣವಾಗಿದೆ. ಇದರಿಂದ ಸಾಮಾಜಿಕ ನ್ಯಾಯ ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ.
| ಮುರುಗೇಂದ್ರ ತುಬಾಕೆ, ಕಿರಿಯ ಶ್ರೇಣಿ ನ್ಯಾಯಾಧೀಶ, ಕೂಡ್ಲಿಗಿ