ಕೂಡ್ಲಿಗಿ: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಸೋಮವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಮಕ್ಕಳ ಆರೋಗ್ಯ ಪುನಶ್ಚೇತನ ಕೇಂದ್ರದ ಅಡುಗೆ ಕೋಣೆಯಲ್ಲಿ ಆಹಾರ ಪದಾರ್ಥಗಳು ಹಾಗೂ ತರಕಾರಿ ಇಲ್ಲದ್ದನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಮಕ್ಕಳ ದಾಖಲಾತಿ ಪರಿಶೀಲಿಸಿ ಆ.16ರ ನಂತರ ಏಕೆ ಮಕ್ಕಳು ದಾಖಲಾಗಿಲ್ಲ ಎಂದು ಡಾ. ನಿರಂಜನ್ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಡಾ.ನಿರಂಜನ್, ಕೆಂಪು ವಲಯದಲ್ಲಿರುವ ಮಕ್ಕಳನ್ನು ಅಂಗನವಾಡಿ ಕಾರ್ಯಕರ್ತೆಯರು ಗುರುತಿಸಿ ಇಲ್ಲಿಗೆ ಕಳಿಸಿದರೆ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಆ.16ರ ನಂತರ ಯಾವ ಮಗುವೂ ಇಲ್ಲಿಗೆ ಬಂದಿಲ್ಲ ಎಂದರು. ಕೇಂದ್ರದ ನಾಮಫಲಕದಲ್ಲಿ ಪೌಷ್ಟಿಕಾಂಶದ ಪುನರ್ವಸತಿ ಕೇಂದ್ರ ಇರಬೇಕು. ಏಕೆ ಬರೆಸಿಲ್ಲ?. ತಕ್ಷಣ ಬದಲಾಯಿಸುವಂತೆ ಡಾ.ವಿನಯ್‌ಗೆ ಸೂಚಿಸಿದರು.
ಇದನ್ನೂ ಓದಿ: ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಿ
ನಂತರ ಹೆರಿಗೆ ವಿಭಾಗಕ್ಕೆ ಭೇಟಿ ನೀಡಿ, ನವಜಾತ ಶಿಶುಗಳ ಆರೈಕೆಗೆ ಫೋಟೋ ಥೆರಪಿ ನೀಡಲು ಒಂದೇ ಯಂತ್ರ ಇರುವುದನ್ನು ಗಮನಿಸಿದ ಶಶಿಧರ, 100 ಹೆರಿಗೆ ಆಗುವ ಆಸ್ಪತ್ರೆಯಲ್ಲಿ ಒಂದೇ ಯಂತ್ರದಲ್ಲಿ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತೀರಿ ಎಂದು ವೈದ್ಯರನ್ನು ಪ್ರಶ್ನಿಸಿದರು.
ಯಂತ್ರಗಳನ್ನು ಒದಗಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ ಎಂದು ಡಾ.ವಿನಯ್ ತಿಳಿಸಿದರು. ಎಲ್ಲ ಮಾಹಿತಿಗಳೊಂದಿಗೆ ಹೊಸಪೇಟೆಯಲ್ಲಿ ಮಂಗಳವಾರ ನಡೆಯುವ ಸಭೆಗೆ ಹಾಜರಾಗಬೇಕೆಂದು ಕೋಸಂಬೆ ಸೂಚಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರಾದೇವಿ, ಸಿಬ್ಬಂದಿ ಶರಣಪ್ಪ, ಹೊಸಪೇಟೆಯ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಬೋಗೇಶ್, ಆಸ್ಪತ್ರೆ ಅಧೀಕ್ಷಕ ಕೆ.ಬಿ.ಎಂ.ವೀರಭದ್ರಯ್ಯ ಇದ್ದರು.